ಕರ್ನಾಟಕ

ಹೆಂಡತಿಯ ಹತ್ಯೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ!

Pinterest LinkedIn Tumblr


ಬೆಂಗಳೂರು: ಪತ್ನಿಯನ್ನು ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಆರೋಪಿ ಶಿವಶಂಕರ್ ಎಂಬಾತ, ಪತ್ನಿಯದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.

‘ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಸುಬ್ಬಯ್ಯ ಗಾರ್ಡನ್‌ನ ಹೊಂಗಸಂದ್ರ ನಿವಾಸಿ ಅನುಷಾ (26) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರದ್ದು ಕೊಲೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾಗಿದೆ.

ಪತಿಯೇ ಕೊಲೆ ಮಾಡಿರುವ ಅನುಮಾನವಿದ್ದು, ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶಿವಶಂಕರ್ ಹಾಗೂ ಅನುಷಾ ಕೆಲ ವರ್ಷಗಳ ಹಿಂದೆ ಮದುವೆ ಆಗಿದ್ದರು. ಸುಬ್ಬಯ್ಯ ಗಾರ್ಡನ್‌ನಲ್ಲಿ ನೆಲೆಸಿದ್ದ ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಇತ್ತೀಚೆಗೆ ನಿತ್ಯವೂ ದಂಪತಿ ನಡುವೆ ಜಗಳ ಶುರುವಾಗಿತ್ತು. ಅದೇ ಕಾರಣಕ್ಕೆ ಆರೋಪಿ, ಜನವರಿ 2ರಂದು ನಸುಕಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಕೊಲೆ ಬಳಿಕ ಪತ್ನಿಯ ಪೋಷಕರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು.

ಪ್ರಜ್ಞೆ ಕಳೆದುಕೊಂಡಿದ್ದ ಆಕೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ’ ಎಂದು ಹೇಳಿದ್ದ. ಪೋಷಕರು ಮೃತದೇಹವನ್ನು ನೋಡಲು ಹೋದಾಗ ಕುತ್ತಿಗೆ ಭಾಗದಲ್ಲಿ ಗಾಯವಿರುವುದನ್ನು ಕಂಡಿದ್ದರು. ನಂತರ ಅವರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದರು.

ಪತ್ನಿಯದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.

Comments are closed.