ಕರ್ನಾಟಕ

ಇಂದು ದೇಶಾದ್ಯಂತ ಮುಷ್ಕರ; ಬಸ್ ಸಂಚಾರ ಸರಾಗ, ಶಾಲಾ-ಕಾಲೇಜಿಗೆ ರಜೆ ಇಲ್ಲ

Pinterest LinkedIn Tumblr


ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಬುಧವಾರ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಂದ್ ನಡೆಯುವುದಿಲ್ಲ. ಕೆಎಸ್ ಆರ್ ಟಿಸಿ, ಬಿಎಂಟಿಸಿ, ಸರ್ಕಾರಿ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಶಾಲಾ-ಕಾಲೇಜು ತೆರೆದಿರುತ್ತದೆ. ಬಸ್ ಸಂಚಾರವೂ ಇದೆ. ಮುಷ್ಕರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೆ ಜಾಥಾ ನಡೆಸಲು ಕಾರ್ಮಿಕ ಸಂಘಟನೆಗಳು ಮನವಿ ಸಲ್ಲಿಸಿವೆ. ಆದರೆ ಮನವಿ ತಿರಸ್ಕರಿಸಲಾಗಿದೆ. ಮೆರವಣಿಗೆಗೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

ಬ್ಯಾಂಕಿಂಗ್ ಸೇವೆ ವ್ಯತ್ಯಯ:

ಕೇಂದ್ರ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳು, ಎಲ್ ಐಸಿ ಉದ್ಯೋಗಿಗಳ ಒಕ್ಕೂಟ ಮುಷ್ಕರಕ್ಕೆ ಬೆಂಬಲ ನೀಡಿವೆ. ಭಾರತೀಯ ಬ್ಯಾಂಕ್ ಗಳ ಸಂಘಟನೆ (ಐಬಿಎ), ಆರು ಬ್ಯಾಂಕ್ ಗಳ ಒಕ್ಕೂಟ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಇದರಿಂದಾಗಿ ಬ್ಯಾಂಕ್ ಸೇವೆ, ಎಟಿಎಂ, ಆನ್ ಸೇವೆ ವ್ಯತ್ಯಯವಾಗಲಿದೆ.

ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆ ಎಂದಿನಂತೆ ಇರಲಿದೆ. ಸರ್ಕಾರಿ ಸಾರಿಗೆ, ಸರ್ಕಾರಿ ಶಾಲೆ, ಮೆಟ್ರೋ ಸಂಚಾರ ಇರಲಿದೆ.

Comments are closed.