ಕರ್ನಾಟಕ

ವರನ ಮೂಗು ಮದುವೆ ಮುರಿದು ಬೀಳಲು ಕಾರಣವಾಯಿತು!

Pinterest LinkedIn Tumblr


ಬೆಂಗಳೂರು: ವರನ ಮೂಗು ಸೊಟ್ಟಗಿದೆ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಳ್ಳಲಿಲ್ಲ ಎಂದು ಮದುವೆಯಾಗಲು ನಿರಾಕರಿಸಿ ವಂಚಿಸಿದ ವಧುವಿನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ಪರಿಚಯವಾದ ಎಚ್​ಎಸ್​ಆರ್ ಲೇಔಟ್​ನ ಯುವತಿ ಜತೆ ಕೋರಮಂಗಲದ ಯುವಕನ ಮದುವೆ ನಿಶ್ಚಯವಾಗಿತ್ತು. ಯುವಕ ಖಾಸಗಿ ಕಂಪನಿ ಉದ್ಯೋಗಿ.ಸೆಪ್ಟೆಂಬರ್​ನಲ್ಲಿ ಯುವತಿ ಮನೆಯಲ್ಲೇ ವಿವಾಹ ನಿಶ್ಚಿತಾರ್ಥವಾಗಿತ್ತು. ಆ ವೇಳೆ ಮೂರು ತಿಂಗಳ ನಂತರ ಮದುವೆ ಇಟ್ಟುಕೊಳ್ಳೋಣ. ಸದ್ಯ ಅಮೆರಿಕದಲ್ಲಿ ಕೆಲಸ ಇದೆ ಎಂದ ಯುವತಿ, ತಿರುಪತಿಯಲ್ಲೇ ಮದುವೆ ನಡೆಯಬೇಕು ಎಂದಿದ್ದಳು. ಅದರಂತೆ ಯುವಕನ ಪಾಲಕರು ಜನವರಿ 30ಕ್ಕೆ ಮದುವೆ ನಿಶ್ಚಯಿಸಿದ್ದರು. ಈ ಸಂಬಂಧ ತಿರುಪತಿಯ ಕರ್ನಾಟಕ ಅತಿಥಿ ಗೃಹದಲ್ಲಿ 40 ಹಾಗೂ ಟಿಟಿಡಿ ಅತಿಥಿ ಗೃಹದಲ್ಲಿ 70 ಕೊಠಡಿ ಬುಕ್ ಮಾಡಿ 1 ಲಕ್ಷ ರೂ. ಮುಂಗಡ ಕೊಟ್ಟಿದ್ದರು. ಸಮಾರಂಭದ ಇತರೆ ವೆಚ್ಚಕ್ಕೆ 4 ಲಕ್ಷ ರೂ. ಖರ್ಚು ಮಾಡಿದ್ದರು.

ಮೂಗಿನ ಕ್ಯಾತೆ: ಅಕ್ಟೋಬರ್​ನಲ್ಲಿ ವಧುವಿಗೆ ಕರೆ ಮಾಡಿ ಮದುವೆ ಸಿದ್ಧತೆ ಬಗ್ಗೆ ವರ ರ್ಚಚಿಸಿದ್ದ, ಆ ವೇಳೆ ಆಕೆ, ನಿನ್ನ ಮೂಗು ಸೊಟ್ಟಗಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಿ ಎಂದಿದ್ದಳು. ತಮಾಷೆಗೆಂದು ಆತ ಸುಮ್ಮನಾಗಿದ್ದ. ಮತ್ತೆ ಕರೆ ಮಾಡಿದಾಗಲೆಲ್ಲ, ಅದೇ ವಿಚಾರ ಮುಂದಿಟ್ಟುಕೊಂಡು ಬೇಸರದ ಮಾತುಗಳನ್ನಾಡಿದ್ದಳು. ಈ ವಿಚಾರವನ್ನು ವಧುವಿನ ಸಹೋದರಿ ಗಮನಕ್ಕೂ ತಂದಿದ್ದ. ಯುವತಿಯ ಸಹೋದರಿ ಇಬ್ಬರನ್ನೂ ಕಾನ್ಪರೆನ್ಸ್ ಕರೆ ಮೂಲಕ ಮಾತನಾಡಿಸಿದ್ದರು. ಈ ವೇಳೆ ಯುವತಿ ‘ಮದುವೆ ಬಗ್ಗೆ ನಿರ್ಧರಿಸುವುದು ನನಗೆ ಬಿಟ್ಟದ್ದು. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ’ ಎಂದಿದ್ದಳು. ಮದುವೆ ಸಮೀಪಿಸುತ್ತಿದ್ದಂತೆ ವಧು ಮತ್ತು ಅವಳ ಪಾಲಕರು ಯುವಕನ ಸಂಪರ್ಕಕ್ಕೆ ಸಿಕ್ಕಿಲ್ಲ. ಮದುವೆ ಸಿದ್ಧತೆಗೆಂದು ಲಕ್ಷಾಂತರ ರೂ. ಖರ್ಚು ಮಾಡಿ ವಂಚನೆಗೆ ಒಳಗಾಗಿರುವ ಸಂಬಂಧ ವಧು, ಆಕೆಯ ಸಹೋದರಿ ಮತ್ತು ತಂದೆ ವಿರುದ್ಧ ವರ ದೂರು ನೀಡಿದ್ದಾನೆ.

Comments are closed.