ಕರ್ನಾಟಕ

ಗ್ರಹಣದ ಸಂದರ್ಭ ವಿಕಲಚೇತನ ಮಕ್ಕಳನ್ನು ತಿಪ್ಪೆ ಗುಂಡಿಯಲ್ಲಿ ಹೂತು ಹಾಕಿದ ಜನರು

Pinterest LinkedIn Tumblr


ಕಲಬುರ್ಗಿ: ಕಂಕಣ ಸೂರ್ಯಗ್ರಹಣದ ವೇಳೆ ತಿಪ್ಪೆಗುಂಡಿಯಲ್ಲಿ ವಿಕಲಚೇತನ ಮಕ್ಕಳನ್ನು ಹೂತಿಡುವ ಅಮಾನವೀಯ ಘಟನೆ ಕಲಬುರ್ಗಿ ಜಿಲ್ಲೆಯ ಹಲವೆಡೆ ನಡೆದಿದೆ.

ಕಲಬುರ್ಗಿ ತಾಲೂಕಿನ ತಾಜ್ ಸುಲ್ತಾನಪುರ, ಕಮಲಾಪುರ ತಾಲೂಕಿನ ಕುರಿಕೋಟ, ಚಿಂಚೋಳಿ ತಾಲೂಕಿನ ಐನೊಳ್ಳಿ ಹಾಗೂ ಗಡಿಲಿಂಗದಹಳ್ಳಿ ಗ್ರಾಮಗಳಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 10 ವರ್ಷಗಳ ಹಿಂದೆ ಕಲಬುರ್ಗಿ ನಗರದಲ್ಲಿ ನಡೆಯುತ್ತಿದ್ದ ಮೌಢ್ಯಕ್ಕೆ ಜಿಲ್ಲಾಡಳಿತ ತಡೆ ಹಾಕಿತ್ತು. ಇದೀಗ ಮತ್ತೊಮ್ಮೆ ಈ ಮೌಢ್ಯ ಮರುಕಳಿಸಿದ್ದು, ರಾಜ್ಯದ ಹಲವೆಡೆಗೂ ವಿಸ್ತರಣೆಗೊಂಡಿದೆ. ತಿಪ್ಪೆಗುಂಡಿಯಲ್ಲಿ ಹೂತಿಟ್ಟವರ ರೋದನ ಮುಗಿಲುಮುಟ್ಟಿದ್ದರೂ, ಪೋಷಕರು ಮಾತ್ರ ಕ್ಯಾರೆ ಎನ್ನಲಿಲ್ಲ. ಚಂದ್ರಗ್ರಹಣಕ್ಕಿಂತಲೂ ಹೆಚ್ಚಾಗಿ ಸೂರ್ಯಗ್ರಹಣ ಅಂದರೆ ಜನ ಬೆಚ್ಚಿ ಬೀಳ್ತಾರೆ. ಸೂರ್ಯಗ್ರಹದಿಂದ ಏನಾದರೂ ಕೇಡು ಕಟ್ಟಿಟ್ಟ ಬುತ್ತಿ ಅನ್ನೋದು ಜನರ ನಂಬಿಕೆ. ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯನಿಗೇ ಗ್ರಹಣ ಹಿಡಿದಾಗ ಜನರಿಗೂ ಏನಾದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನೋ ಮೂಢನಂಬಿಕೆ ಜನತೆಯಲ್ಲಿದೆ. ಇಂತಹ ಮೌಢ್ಯತೆ ನಡುವೆ ಮತ್ತೊಂದು ಮೌಢ್ಯತೆಯೂ ಕಲ್ಯಾಣ ಕರ್ನಾಟಕದ ಜನತೆಯಲ್ಲಿ ಬೇರೂರಿದೆ.

ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿ ಈ ಮೌಢ್ಯಾಚರಣೆಯ ಕೇಂದ್ರಬಿಂದು. ಇಂದು ಆಗಸದಲ್ಲಿ ಕಂಕಣ ಸೂರ್ಯಗ್ರಹಣದ ವೇಳೆ ಕೆಲ ಮೌಢ್ಯಾಚರಣೆಗಳೂ ನಡೆದವು. ವಿಕಲಚೇತನರನ್ನು ತಿಪ್ಪೆಗುಂಡಿಯಲ್ಲಿ ಹೂತಿಡುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳಲಾಯಿತು. ಜಿಲ್ಲೆಯ ತಾಜ್ ಸುಲ್ತಾನಪುರ, ಕುರಿಕೋಟ, ಗಡಿಲಿಂಗದಹಳ್ಳಿ ಹಾಗೂ ಐನೊಳ್ಳಿ ಗ್ರಾಮಗಳಲ್ಲಿ ಮಕ್ಕಳನ್ನು ಹೂತಿಟ್ಟ ಪ್ರಕರಣ ನಡೆದಿದೆ. ಸೂರ್ಯ ಗ್ರಹಣದ ವೇಳೆ ವಿಕಲಚೇತನರನ್ನು ತಿಪ್ಪೆಗುಂಡಿಯಲ್ಲಿ ಹೂತಿಟ್ಟರೆ, ಅವರ ಅಂಗವೈಕಲ್ಯ ಸರಿಹೋಗುವುದೆಂಬ ಮೂಢನಂಬಿಕೆ ಈ ಭಾಗದಲ್ಲಿದೆ. ತಾಜ್ ಸುಲ್ತಾನಪುರ ಗ್ರಾಮದ ಬಳಿ ತಿಪ್ಪುಗುಂಡಿಯಲ್ಲಿ ಮೂರು ಮಕ್ಕಳನ್ನು ಹೂತಿಡಲಾಗಿತ್ತು. ತಿಪ್ಪೆಗುಂಡಿಯಲ್ಲಿ ಹೂತಿಟ್ಟರೆ ಅಂಗವೈಕಲ್ಯ ಸರಿಹೋಗುವುದೆಂದು ಹಿರಿಯರು ಹೇಳಿದ ಮಾತಿನಂತೆ ಹೀಗೆ ಮಾಡಿದ್ದಾರೆ. ಎಲ್ಲ ಆಸ್ಪತ್ರೆಗಳಿಗೆ ಸುತ್ತಿದ್ದಾಗಿದೆ. ದೇವರ ಮೇಲೆ ಭಾರ ಹಾಕಿ ತಿಪ್ಪುಗುಂಡಿಯಲ್ಲಿ ಹೂತಿದ್ದು, ಅಂಗವೈಕಲ್ಯ ಸರಿಹೋಗುವುದೆಂದು ಪೋಷಕರು ವಿಶ್ವಾಸ ವ್ಯಕ್ತಪಡಿಸಿದರು.

ಹೀಗೆ ತಿಪ್ಪೆಗುಂಡಿಗಳಲ್ಲಿ ಮಕ್ಕಳನ್ನು ಹೂತಿಡುವ ಪದ್ಧತಿ ಇಂದು ನಿನ್ನೆಗೆ ಸೀಮಿತವಾಗಿಲ್ಲ. ಹತ್ತಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಯುವಕರವರೆಗೂ ತಿಪ್ಪೆಗುಂಡಿಯಲ್ಲಿ ಹೂತಿಡಲಾಗುತ್ತಿದೆ. ವೈಕಲ್ಯ ಹೊಂದಿಗೆ ಅಂಗವನ್ನು ಸೂರ್ಯಗ್ರಹಣದ ವೇಳೆ ತಿಪ್ಪೆಗುಂಡಿಯಲ್ಲಿ ಹೂತಿಟ್ಟರೆ ಅದು ಸರಿಹೋಗುವುದೆಂಬ ನಂಬಿಕೆಯಿದೆ. ಹೀಗಾಗಿ ದೇಹದ ಬಹುತೇಕ ಅಂಗಾಂಗಗಳನ್ನು ಹೂತಿಡಲಾಗುತ್ತದೆ. ಸೂರ್ಯಗ್ರಹಣದ ಆರಂಭಕ್ಕೂ ಮುನ್ನ ಕುತ್ತಿಗೆ ಮಟ್ಟ ಹೂತಿಟ್ಟು, ಸೂರ್ಯಗ್ರಹಣದ ನಂತರ ತಿಪ್ಪೆಗುಂಡಿಯಿಂದ ಹೊರತೆಗೆಯಲಾಗುತ್ತದೆ. ಕಲಬುರ್ಗಿಯ ರೋಜಾ, ಗುಲ್ಲಾಬಾವಡಿ ಪ್ರದೇಶದಲ್ಲಿ ಈ ಮೌಢ್ಯಾಚರಣೆ ಹೆಚ್ಚಾಗಿ ಚಾಲ್ತಿಯಲ್ಲಿತ್ತು. ಕರ್ನಾಟಕಕ್ಕಿಂತ ನೆರೆಯ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಿಂದ ನೂರಾರು ಜನ ಬಂದು ಗ್ರಹಣದ ವೇಳೆ ವಿಕಲಚೇತನರನ್ನು ತಿಪ್ಪೆಗುಂಡಿಯಲ್ಲಿ ಹೂತಿಡುತ್ತಿದ್ದರು. ನಂತರ ಆಯಿಲ್ ಮಸಾಜ್ ಮಾಡಿಸಿಕೊಂಡು ವಾಪಸ್ಸಾಗುತ್ತಿದ್ದರು. ಎರಡು-ಮೂರು ಬಾರಿ ಈ ರೀತಿ ಮಾಡಿದಲ್ಲಿ ಅಂಗವೈಕಲ್ಯ ಸರಿಹೋಗುತ್ತದೆ ಎಂಬ ಭಾವನೆ ಜನತೆಯಲ್ಲಿದೆ.

10 ವರ್ಷಗಳ ಹಿಂದೆ ಇಂತಹ ಮೌಢ್ಯಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಈಗ ಮತ್ತೆ ಇಂತಹ ಘಟನೆ ನಡೆದಿದೆ. ಈ ಬಗ್ಗೆ ನ್ಯೂಸ್ 18 ವರದಿ ಪ್ರಸಾರ ಮಾಡಿದಾಗ ಓಡೋಡಿ ಬಂದ ಸಂಘಟಕರು, 10 ವರ್ಷಗಳ ನಂತರದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿರಲಿಲ್ಲ. ಇದೀಗ ಜಿಲ್ಲೆಯಲ್ಲಿ ಮತ್ತೆ ಅದೇ ಮಾದಿರಿಯ ಘಟನೆಗಳು ಪುನರಾವರ್ತಿಸಿವೆ. ಈ ಕುರಿತು ನ್ಯೂಸ್ 18 ಕನ್ನಡ ಈ ಬಗ್ಗೆ ಗಮನ ಸೆಳೆಯುತ್ತಿದ್ದಂತೆಯೇ ಜಾಗೃತಗೊಂಡ ಕೆಲ ಪ್ರಗತಿಪರ ಸಂಘಟನೆಗಳು, ಮಠಾಧೀಶರು, ಅಧಿಕಾರಿಗಳು, ತಿಪ್ಪೆಗುಂಡಿಯಲ್ಲಿ ಹೂತಿಟ್ಟವರನ್ನು ಮೇಲೆ ತೆಗೆಯಿಸಿದ್ದಾರೆ. ನ್ಯೂಸ್ 18 ಕನ್ನಡ ಕಾರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀಶೈಲ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ, ವಿಧಾನಸಭೆ ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ ಮತ್ತಿತರರು ಘಟನೆಯನ್ನು ಖಂಡಿಸಿದ್ದಾರೆ. ಶ್ರೀಗಳ ಕಾಲಿಗೆ ಬಿದ್ದ ಪೋಷಕರು ಯಾರದೋ ಮಾತು ಕೇಳಿ ಹೀಗೆ ಮಾಡಿರೋದಾಗಿ ತಿಳಿಸಿದರು. ತಪ್ಪಾಗಿದೆ, ಇನ್ನು ಮುಂದೆ ಹೀಗೆ ಮಾಡೋದಿಲ್ಲ ಎಂದರು.

ನಮ್ಮ ಊರಿನಲ್ಲಿಯೇ ಈ ರೀತಿಯ ಘಟನೆ ನಡೆದಿರುವುದು ನಮ್ಮೆಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ ಎಂದು ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆಯಿದ್ದರೂ ಅದು ಸಮರ್ಪಕವಾಗಿ ಜಾರಿಯಾಗದಿರುವುದೇ ಈ ರೀತಿಯ ಘಟನೆಗಳಿಗೆ ಕಾರಣ. ಕೂಡಲೇ ಹೂತಿಟ್ಟವರನ್ನು ಮತ್ತು ಅದಕ್ಕೆ ಪ್ರೇರಣೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಬಕೆಂದು ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ ಆಗ್ರಹಿಸಿದ್ದಾರೆ.

ಗ್ರಹಣ ಮುಕ್ತಾಯಕ್ಕೂ ಮುನ್ನವೇ ತಿಪ್ಪೆಗುಂಡಿಯಿಂದ ಮಕ್ಕಳನ್ನು ಹೊರಗೆ ತೆಗೆಯಿಸಿರುವುದಕ್ಕೆ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ಬಳಿ ಹೋಗಿ ಸಾಕಾಗಿ ಇಲ್ಲಿ ತಿಪ್ಪೆಗುಂಡಿಯಲ್ಲಿ ಹೂತಿಟ್ಟಿದ್ದೇವೆ. ಆದರೆ ಅದಕ್ಕೂ ಕಲ್ಲು ಬಿದ್ದಿತೆಂದು ಸಂಜನಾ ಅಜ್ಜಿ ಚಂದಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಹಣ ಮುಗಿಯುವುದರೊಳಗಾಗಿ ತೆಗೆದಿರೋದ್ರಿಂದ ನಮಗೆ ಯಾವುದೇ ಲಾಭವಾಗಿಲ್ಲ. ಗ್ರಹಣ ಮುಗಿಯೋವರೆಗೂ ಹೂತಿಟ್ಟಿದ್ದರೆ ಮಗು ಗುಣಮುಖವಾಗುತ್ತಿತ್ತು ಎಂದು ತಾಯಿ ಅಂಬಿಕಾ ಅಭಿಪ್ರಾಯಪಟ್ಟಿದ್ದಾರೆ. ತಿಪ್ಪೆಗುಂಡಿಯಿಂದ ತೆಗೆದ ಮಕ್ಕಳನ್ನು ನೇರವಾಗಿ ಜಿಲ್ಲಾ ಅಸ್ಪತ್ರೆಗೆ ಕರೆತಂದು ತಪಾಸಣೆಗೆ ಗುರಿಪಡಿಸಲಾಯಿತು. ಈ ಪೈಕಿ ಓರ್ವ ಬಾಲಕಿ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗುವುದು. ಮತ್ತೋರ್ವ ಬಾಲಕಿಗೆ ಫಿಜಿಯೋ ಥೆರಪಿ ಮೂಲಕ ಸ್ವಾಧೀನ ಕಳೆದುಕೊಂಡ ಕೈ-ಕಾಲು ಸರಿಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ನಾಲ್ಕು ವರ್ಷದ ಇನ್ನೊರ್ವ ಬಾಲಕಿಗೂ ಸೂಕ್ತ ಚಿಕಿತ್ಸೆ ನೀಡೋದಾಗಿ ತಿಳಿಸಿದ್ದು, ಕೆಲ ಪೋಷಕರು ಇದರಿಂದ ಸಮಾಧಾನಗೊಂಡಿದ್ದಾರೆ.

ಕಲ್ಯಾಣ ಕರ್ನಾಟಕ ಮೌಢ್ಯಾಚರಣೆಗಳ ತವರೆಂದೇ ಹೇಳಬಹುದು. ಭಾನಾಮತಿ ಸೇರಿ ಹಲವಾರು ಕಂದಾಚಾರಗಳು ಈಗಲೂ ಚಾಲ್ತಿಯಲ್ಲಿವೆ. ಇದೀಗ ಮಕ್ಕಳನ್ನೂ ಹೂತಿಡುವ ಮೌಢ್ಯಾಚರಣೆ ಕಲಬುರ್ಗಿಯ ಜೊತೆಗೆ ರಾಜ್ಯದ ಇತರೆಡೆಗೂ ವಿಸ್ತರಣೆಯಾಗಲಾರಂಭಿಸಿದೆ. ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದರೂ ಮೌಢ್ಯಾಚರಣೆಗಳಿಗೆ ಬ್ರೇಕ್ ಬಿದ್ದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

Comments are closed.