ರಾಯಚೂರು: ಗೋಲಿಬಾರ್ ಪ್ರಕರಣದ ಕುರಿತ ತನಿಖೆ ಪ್ರಗತಿಯಲ್ಲಿದ್ದು, ವರದಿ ಕೈಸೇರುವವರೆಗೆ ಮೃತರ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಿಗೆ ಇದೀಗ ಭಿನ್ನ ರಾಗ ತೆಗೆದಿರುವ ಸಚಿವ ಶ್ರೀರಾಮುಲು ಮೃತರ ಕುಟುಂಬಗಳಿಗೆ ಪರಿಹಾರ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸುವ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಮಂಗಳೂರು ಹಿಂಸಾಚಾರ ಪ್ರಕರಣದಲ್ಲಿ ಸತ್ತವರ ಕುಟುಂಬಗಳಿಗೆ ಒಂದು ರೂಪಾಯಿ ಕೂಡ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಬೆನ್ನಲ್ಲೇ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಮೃತರ ಕುಟುಂಬಗಳಿಗೆ ಪರಿಹಾರ ನೀಡಲೇಬೇಕು ಎಂದು ಶ್ರೀರಾಮುಲು ಆಗ್ರಹ ಮಾಡಿದ್ದಾರೆ.
ಇಷ್ಟೇ ಅಲ್ಲದೇ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಶ್ರೀರಾಮುಲು ಹೇಳಿದ್ದಾರೆ. ಮಂಗಳೂರು ಹಿಂಸಾಚಾರ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ನ್ಯಾಯಾಂಗ ತನಿಖೆಯಾದಾಗ ಎಲ್ಲವೂ ಗೊತ್ತಾಗುತ್ತದೆ. ಆ ನಂತರ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪ್ರಕರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇನ್ನು, ಮಂತ್ರಾಲಯ ಹಾಗೂ ಎಲೆಬಿಚ್ಚಾಲಿ ಭೇಟಿ ಕುರಿತು ಮಾತನಾಡಿದ ಶ್ರೀರಾಮುಲು, ನನ್ನ ಹರಕೆ ಇತ್ತು, ಹೀಗಾಗಿ ಭೇಟಿ ನೀಡಿದ್ದೇನೆ ಎಂದರು. ಇದೇ ವೇಳೆ, ಡಿಸಿಎಂ ಹುದ್ದೆ ಕುರಿತಾಗಿ, ಡಿಸಿಎಂ ಹುದ್ದೆ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಷಯ. ನನಗೆ ಡಿಸಿಎಂ ಹುದ್ದೆ ನೀಡಬೇಕೆಂಬುವುದು ಜನರ ಅಭಿಪ್ರಾಯ. ರಾಷ್ಟ್ರೀಯ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
Comments are closed.