ಕರ್ನಾಟಕ

ಅಕ್ಕನ ಹೆಸರಲ್ಲಿ 7 ಕೋಟಿ ಚಂದಾ ವಸೂಲಿ ಮಾಡಿ ಹಣ ದುರ್ಬಳಕೆ: ಇಂದ್ರಜಿತ್ ಲಂಕೇಶ್ ಆರೋಪ ತಳ್ಳಿಹಾಕಿದ ಕವಿತಾ ಲಂಕೇಶ್

Pinterest LinkedIn Tumblr


ಬೆಂಗಳೂರು: ಗೌರಿ ಲಂಕೇಶ್ ಹೆಸರಲ್ಲಿ ಟ್ರಸ್ಟ್‌ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಆರೋಪಿಸಿದ್ಧಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಇಂದ್ರಜಿತ್ ಲಂಕೇಶ್, ತಮ್ಮ ಅಕ್ಕನ ಹೆಸರಲ್ಲಿ 7 ಕೋಟಿ ರೂ. ಚಂದಾ ವಸೂಲಿ ಮಾಡಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ಧಾರೆ. ಗೌರಿ ಲಂಕೇಶ್ ಹೆಸರಿನ ಟ್ರಸ್ಟ್‌ನಲ್ಲಿ ನಮ್ಮ ಕುಟುಂಬದವರು ಯಾರೂ ಇಲ್ಲ ಎಂದು ಆರೋಪಿಸಿರುವ ಇಂದ್ರಜಿತ್, ಅನ್ಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಟ್ರಸ್ಟ್ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.

ಇಂದ್ರಜಿತ್ ಲಂಕೇಶ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಹೋದರಿ ಕವಿತಾ ಲಂಕೇಶ್, ತಮ್ಮ ಅಕ್ಕನ ಹೆಸರಿನ ಟ್ರಸ್ಟ್‌ನಲ್ಲಿ ನಾನೇ ಇದ್ದೀನಿ ಎಂದು ಹೇಳಿದ್ದಾರೆ. ಗೌರಿ ಲಂಕೇಶ್ ಟ್ರಸ್ಟ್‌ಗೆ ಎಷ್ಟು ಹಣ ಬಂದಿದೆ, ಎಷ್ಟು ಹಣ ಖರ್ಚಾಗಿದೆ ಎಂಬುದರ ಲೆಕ್ಕ ನಮ್ಮ ಬಳಿ ಇದೆ ಎಂದು ಕವಿತಾ ಲಂಕೇಶ್ ಸ್ಪಷ್ಟನೆ ನೀಡಿದ್ಧಾರೆ. ಇಂದ್ರಜಿತ್ ಲಂಕೇಶ್ ಈ ರೀತಿ ಏಕೆ ಹೇಳಿಕೆ ನೀಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದಿರುವ ಕವಿತಾ, ಯಾವುದೇ ರೀತಿಯಲ್ಲೂ ಚಂದಾ ಹಣ ದುರ್ಬಳಕೆ ಆಗಿಲ್ಲ ಎಂದು ಸಮರ್ಥಿಸಿಕೊಂಡಿದ್ಧಾರೆ.

5 ಸೆಪ್ಟೆಂಬರ್ 2017 ರಂದು ರಾತ್ರಿ 8.30ರ ಸುಮಾರಿಗೆ ಬೆಂಗಳೂರಿನ ರಾಜರಾಜೇಶ್ವರಿ ನಿವಾಸದ ಎದುರಲ್ಲೇ ಗೌರಿ ಲಂಕೇಶ್‌ ಅವರ ಹತ್ಯೆಯಾಗಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗೌರಿ ಲಂಕೇಶ್ ಅವರ ಮೇಲೆ ಗುಂಡಿನ ಮಳೆಗರೆದಿದ್ದರು. ಗೌರಿ ಲಂಕೇಶ್‌ ಸ್ಥಳದಲ್ಲೇ ಹತ್ಯೆಗೀಡಾಗಿದ್ದರು. ಪ್ರಕರಣ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Comments are closed.