
ಶಿವಮೊಗ್ಗ: ಮೊಬೈಲ್ ವಿಚಾರದಲ್ಲಿ ಭಾನುವಾರ ಸೋದರ ಮಾವನೇ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.5 ವರ್ಷದ ರಂಜನಿ ಹತ್ಯೆಯಾದ ಬಾಲಕಿ.
ಆಕೆಯ ಸೋದರ ಮಾವ (ಬಾಲಕಿ ತಾಯಿಯ ಸಹೋದರ) ಸಂತೋಷ್ (23) ಕೊಲೆ ಮಾಡಿದ ಆರೋಪಿ. ರಂಜನಿ ಪಾಲಕರು ಚಿತ್ರದುರ್ಗದಲ್ಲಿ ವಾಸವಿದ್ದು, ರಜಿನಿಯನ್ನು ತಾಯಿಯ ತವರುಮನೆ ಗಾಡಿಕೊಪ್ಪದಲ್ಲಿ ಅಜ್ಜ ಅಜ್ಜಿ ಜತೆ ಬಿಟ್ಟಿದ್ದರು.ಮಾನಸಿಕ ಅಸ್ವಸ್ಥನಾಗಿದ್ದ ಆರೋಪಿ ಸಂತೋಷ್ ಮೊಬೈಲ್ ತೆಗೆದುಕೊಳ್ಳುವ ವಿಷಯಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ. ಜಗಳದ ನಂತರ ತಂದೆ ಜಯಣ್ಣ ಸಂತೋಷನಿಗೆ ಮೊಬೈಲ್ ಕೊಡಿಸಿದ್ದರು.
ಆದರೆ ಆ ಮೊಬೈಲ್ನ್ನು ರಂಜನಿ ಒಮ್ಮೆ ಹಾಳು ಮಾಡಿದ್ದಳು ಎಂಬ ಕೋಪ ಸಂತೋಷನಿಗೆ ಇತ್ತು. ಈ ಕಾರಣದಿಂದ ರಂಜನಿಯನ್ನು ಬೆಳಗ್ಗೆ ಮಲಗಿದ್ದಲ್ಲಿಯೇ ಚಾಕು ಇರಿದಿದ್ದ. ಬಾಲಕಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.ಸಂತೋಷ್ ಮಾನಸಿಕ ಅಸ್ವಸ್ಥನಾಗಿದ್ದು, ವರ್ಷದ ಹಿಂದೆ ನಗರದ ಮಾನಸಿಕ ಆಸ್ಪತ್ರೆವೊಂದಕ್ಕೆ ಸೇರಿಸಲಾಗಿತ್ತು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ಗಾಡಿಕೊಪ್ಪದ ಬಸವೇಶ್ವರ ದೇವಸ್ಥಾನದ ಬಳಿ ಎಳನೀರು ಮಾರುತ್ತಿದ್ದ. ಮೊಬೈಲ್ ಕೊಡಿಸದ ವಿಚಾರಕ್ಕೆ ತಂದೆಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ.ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಸಂತೋಷ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.