ಕರ್ನಾಟಕ

ನಾನೀಗ ಸಂಪೂರ್ಣ ಗುಣಮುಖನಾಗಿದ್ದು, ಒಂದು ವಾರಗಳ ವಿಶ್ರಾಂತಿ ಬಳಿಕ ರಾಜಕೀಯ ಜೀವನಕ್ಕೆ ಮರಳುವೆ: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಕಳೆದ 5 ದಿನಗಳಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾನುವಾರ ಬಿಡುಗಡೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರ ಜೊತೆಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನೀಗ ಸಂಪೂರ್ಣ ಗುಣಮುಖನಾಗಿದ್ದೇನೆ, ಒಂದು ವಾರಗಳ ಕಾಲ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಇನ್ನೊಂದು ವಾರ ಮನೆಯಲ್ಲಿದ್ದು ನಂತರ ಎಂದಿನಂತೆ ರಾಜಕೀಯ ಜೀವನಕ್ಕೆ ಮರಳುವುದಾಗಿ ಹೇಳಿದರು.

ನನಗೆ 2000ನೇ ಇಸವಿ ಆಗಸ್ಟ್ ತಿಂಗಳಲ್ಲಿ ಎರಡೂ ರಕ್ತನಾಳಗಳು ಬ್ಲಾಕ್ ಆಗಿದ್ದವು, ಆಗ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೊಪ್ಲಾಸ್ಟಿ ಮಾಡಿಸಿ ಸ್ಟಂಟ್ ಅಳವಡಿಸಲಾಗಿತ್ತು. 19 ವರ್ಷಗಳ ನಂತರ ಎರಡು ರಕ್ತನಾಳಗಳಲ್ಲಿ ಒಂದು ರಕ್ತನಾಳ ಮತ್ತೆ ಶೇಕಡಾ 95ರಷ್ಟು ಬ್ಲಾಕ್ ಆಗಿತ್ತು. ಆಂಜಿಯೊಪ್ಲಾಸ್ಟಿ ಚಿಕಿತ್ಸೆ ಮಾಡಿಸಿ ಎಂದು ವೈದ್ಯರು ಹೇಳಿದರು. ಅದರಂತೆ ಚಿಕಿತ್ಸೆ ಪಡೆದು ರಕ್ತನಾಳ ಬ್ಲಾಕ್ ಆಗಿದ್ದನ್ನು ನಿವಾರಿಸಿ ರಕ್ತ ಚಲನೆಯಾಗುವಂತೆ ಮಾಡಿದ್ದಾರೆ. ನಂತರ ಸ್ಟಂಟ್ ಅಳವಡಿಸಿದ್ದಾರೆ.

ನಾನೀಗ ಸಂಪೂರ್ಣ ಗುಣಮುಖನಾಗಿದ್ದು ಯಾರೂ ಯಾವುದೇ ಕಳವಳಪಡುವ ಅಗತ್ಯವಿಲ್ಲ ಎಂದರು.

ರಾಜಕಾರಣದಲ್ಲಿ ಯಾರೂ ಶಾಶ್ವತವಾಗಿ ವೈರಿಗಳೂ ಇರುವುದಿಲ್ಲ, ಸ್ನೇಹಿತರೂ ಇರುವುದಿಲ್ಲ. ಮನುಷ್ಯತ್ವದಿಂದ ಎಲ್ಲಾ ಪಕ್ಷದವರು ನನ್ನನ್ನು ನೋಡಲು ಬಂದಿದ್ದಾರೆ. ಅವರಿಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಾನು ಗುಣಮುಖನಾಗಲೆಂದು ಹಲವರು ಪ್ರಾರ್ಥನೆ ಮಾಡಿದ್ದಾರೆ. ಪ್ರಸಾದ ತಂದುಕೊಟ್ಟಿದ್ದಾರೆ ಅವರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು ಎಂದರು.

Comments are closed.