ಕರ್ನಾಟಕ

ಹೆಂಡತಿಯಿಂದ ಆಸ್ತಿಗಾಗಿ ಬ್ಲ್ಯಾಕ್‍ಮೇಲ್ – ಬೇಸತ್ತು ಬೆಂಗ್ಳೂರಿನ ಟೆಕ್ಕಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಹಾಲನಾಯಕನಹಳ್ಳಿಯಲ್ಲಿ ನಡೆದಿದೆ.

ಟೆಕ್ಕಿ ಶ್ರೀನಾದ್ (39) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಆಂಧ್ರ ಪ್ರದೇಶ ಮೂಲದ ಟೆಕ್ಕಿ ಶ್ರೀನಾದ್ 2009ರಲ್ಲಿ ರೇಖಾ ಜೊತೆ ಮದುವೆಯಾಗಿತ್ತು. ದಂಪತಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ ಆಗಿದ್ದರು.

ಶ್ರೀನಾದ್ ಬ್ಯಾಂಕಿನಲ್ಲಿ ಲೋನ್ ಮಾಡಿ ಅಪಾರ್ಟ್ ಮೆಂಟ್‍ನಲ್ಲಿ ಫ್ಲಾಟ್ ಖರೀದಿಸಿದ್ದರು. ಬಳಿಕ ಪ್ರತಿ ತಿಂಗಳ ಸಾಲ ಕಟ್ಟುತ್ತಿದ್ದರು. ಇತ್ತ ಪತ್ನಿ ರೇಖಾ ಮಾತ್ರ ಐಷಾರಾಮಿ ಜೀವನ ನಡೆಸುವುದು ಹಾಗೂ ದುಂದು ವೆಚ್ಚ ಮಾಡುತ್ತಿದ್ದಳು. ಹಾಗಾಗಿ ಶ್ರೀನಾದ್ ಕಡಿಮೆ ಖರ್ಚು ಮಾಡುವಂತೆ ರೇಖಾಳಿಗೆ ಬುದ್ಧಿ ಹೇಳಿದ್ದಾರೆ. ಆದರೆ ಇದರಿಂದ ಕೋಪಗೊಂಡ ರೇಖಾ ಹಾಗೂ ಆಕೆಯ ಕುಟುಂಬಸ್ಥರು ಶ್ರೀನಾದ್‍ಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು.

ಅಲ್ಲದೆ ನಿನ್ನ ತಂದೆ-ತಾಯಿಯಿಂದ ಆಸ್ತಿ ಬರೆದುಕೊಂಡು ಬಾ, ಒಂದು ಲಕ್ಷ ರೂ. ಬಾಡಿಗೆ ಬರುವ ಆಸ್ತಿ ಕೊಡುವಂತೆ ಕೇಳು. ಇಲ್ಲದಿದ್ದರೆ ಡಿವೋರ್ಸ್ ನೀಡುತ್ತೇನೆ ಎಂದು ರೇಖಾ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಳು. ಇದರಿಂದ ಮಾನಸಿಕವಾಗಿ ಮನನೊಂದಿದ್ದ ಶ್ರೀನಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಸುಮಾರು 6.40ಕ್ಕೆ ಅಪಾರ್ಟ್ ಮೆಂಟ್‍ನ ವಾಚ್‍ಮ್ಯಾನ್ ಶ್ರೀನಾದ್ ಅವರ ತಂದೆ ನಾಗೇಶ್ವರ ರಾವ್‍ಗೆ ಕರೆ ಮಾಡಿ ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಶ್ರೀನಾದ್ ತಂದೆ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶವಗಾರದಲ್ಲಿ ಮೃತದೇಹವನ್ನು ಗುರುತಿಸಿದ್ದಾರೆ. ಇದೇ ವೇಳೆ ಶ್ರೀನಾದ್ ತನ್ನ ಪತ್ನಿ ರೇಖಾ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.

ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀನಾದ್ ತಂದೆ ನಾಗೇಶ್ವರ ರಾವ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿ ರೇಖಾ ಹಾಗೂ ಆಕೆ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಐಪಿಸಿ ಸೆಕ್ಷನ್ 34 (ಅಪರಾಧಿಕ ಸಂಚು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

Comments are closed.