ಕರ್ನಾಟಕ

ಅತಂತ್ರರಾದ ರೋಷನ್‌ ಬೇಗ್‌

Pinterest LinkedIn Tumblr


ಬೆಂಗಳೂರು: ಮಾತೃಪಕ್ಷ ಕಾಂಗ್ರೆಸ್‌ನಿಂದ ಕಾಲ್ಕಿತ್ತ ಮಾಜಿ ಸಚಿವ ಆರ್‌ ರೋಷನ್‌ ಬೇಗ್‌ಗೆ ಬಿಜೆಪಿಯಲ್ಲಿ ನಿರೀಕ್ಷಿತ ಸ್ವಾಗತ ಸಿಗದೆ ಅವರ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಪರಿಣಾಮ ಅವರೀಗ ಉಪಚುನಾವಣೆ ಫಲಿತಾಂಶದ ಬಳಿಕ ಮೌನಕ್ಕೆ ಶರಣಾಗಿದ್ದಾರೆ.

ಕಾಂಗ್ರೆಸ್‌ನ ಶಾಸಕರೊಟ್ಟಿಗೆ ರಾಜೀನಾಮೆ ನೀಡಿ ಅನರ್ಹ ಶಾಸಕರೆಲ್ಲ ಬಿಜೆಪಿಗೆ ಸೇರ್ಪಡೆಯಾದರೂ, ಕೊನೇ ಕ್ಷಣದಲ್ಲಿ ಬೇಗ್‌ ಪಾಲಿಗೆ ಬಿಜೆಪಿ ಬಾಗಿಲು ಮುಚ್ಚಿತು ಮತ್ತು ಉಪಚುನಾವಣೆಯಲ್ಲಿ ಟಿಕೆಟ್‌ ಕೂಡ ಸಿಗಲಿಲ್ಲ. ಬಿಜೆಪಿ ಸೇರಲಾಗದೆ, ವಿಶ್ವಾಸದ್ರೋಹಕ್ಕಾಗಿ ಮಾತೃಪಕ್ಷ ಕಾಂಗ್ರೆಸ್‌ ಪಕ್ಷಕ್ಕೂ ಮರಳಲಾಗದೆ ಬೇಗ್‌ ಜೆಡಿಎಸ್‌ ಬಾಗಿಲು ಬಡಿದಿದ್ದರು. ಆದರೆ, ಜನತಾ ಪರಿವಾರದಲ್ಲಿ ಜತೆಗಿದ್ದ ಈ ಹಳೇ ಸ್ನೇಹಿತನ ಸ್ನೇಹಹಸ್ತಕ್ಕೆ ಜೆಡಿಎಸ್‌ ನಾಯಕತ್ವ ಕೂಡ ಸೊಪ್ಪು ಹಾಕಲಿಲ್ಲ.

ಶಿವಾಜಿನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಚಿಂತನೆಯನ್ನು ಕೊನೇ ಕ್ಷಣದಲ್ಲಿ ಬೇಗ್‌ ಕೈಬಿಟ್ಟರು. ಬಿಜೆಪಿ ಪಕ್ಷ ಬೇಡವೆಂದರೂ ಸಿಎಂ ಯಡಿಯೂರಪ್ಪ ಕೈಹಿಡಿಯುತ್ತಾರೆ ಎಂಬ ವಿಶ್ವಾಸದಲ್ಲಿ ತಮ್ಮ ಬೆಂಬಲಿಗರ ಮೂಲಕ ಉಪಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವ ಭರವಸೆ ನೀಡಿದರು. ಕೆಲವು ಕಾರ್ಪೊರೇಟರ್‌ಗಳನ್ನು ಬಿಜೆಪಿಗೆ ಸೇರ್ಪಡೆಯೂ ಮಾಡಿದರು. ಆದರೆ, ಉಪಚುನಾವಣೆಯಲ್ಲಿ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವುದೂ ಬೇಗ್‌ಗೆ ಸಾಧ್ಯವಾಗಲಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಡಲಾಗದೆ ಸಿಎಂ ಬಿಎಸ್‌ವೈ ಕೃಪೆಯೂ ಬೇಗ್‌ಗೆ ಸಿಗಲಿಲ್ಲ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಓಡಾಡಿದ ಕಾರಣಕ್ಕೆ ಕಾಂಗ್ರೆಸ್‌ಗೆ ಮರಳುವ ಅವಕಾಶವೂ ಸಂಪೂರ್ಣ ಬಂದ್‌ ಆಯಿತು. ಹೀಗಾಗಿ, ಉಪಚುನಾವಣೆ ಫಲಿತಾಂಶದ ಬಳಿಕ ಬೇಗ್‌ ಸಂಪೂರ್ಣ ನೇಪಥ್ಯಕ್ಕೆ ಸರಿದಿದ್ದು, ಅವರ ರಾಜಕೀಯ ಭವಿಷ್ಯ ಮುಸುಕಾಗಿದೆ.

Comments are closed.