
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜಕೀಯ ನಿವೃತ್ತಿಯ ಬಗ್ಗೆಯೂ ಮಾತನಾಡುತ್ತಿದ್ದಾರೆ.
ಆದರೆ ಸಿದ್ದರಾಮಯ್ಯನವರ ಬಾಯಲ್ಲಿ ರಾಜಕೀಯ ನಿವೃತ್ತಿಯ ಮಾತು ಕೇಳುತ್ತಿದ್ಂತೆ ಕಾಂಗ್ರೆಸ್ನ ಹಾಲಿ, ಮಾಜಿ ಶಾಸಕರು, ಮುಖಂಡರು ಅವರ ನಿವಾಸಕ್ಕೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಕುಮಾರ್, ಎಚ್.ಕೆ.ಪಾಟೀಲ್, ಐವನ್ ಡಿಸೋಜ, ಪ್ರಕಾಶ್ ರಾಠೋಡ್, ಜಯಮಾಲಾ, ವಿ.ಎಸ್. ಉಗ್ರಪ್ಪ ಈಗಾಗಲೇ ಸಿದ್ದರಾಮಯ್ಯನವರ ನಿವಾಸಕ್ಕೆ ದೌಡಾಯಿಸಿದ್ದು ರಾಜಕೀಯ ನಿವೃತ್ತಿ ಪಡೆಯದಂತೆ ಮನವಿ ಮಾಡಿದ್ದಾರೆ. ಅಲ್ಲದೆ ರಾಜೀನಾಮೆಯನ್ನೂ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವೆ ಜಯಮಾಲಾ, ಸಿದ್ದರಾಮಯ್ಯ ಕಾಂಗ್ರೆಸ್ ಶಕ್ತಿ. ಅವರ ರಾಜೀನಾಮೆ ನಿರ್ಧಾರವನ್ನು ನಾವು ಪ್ರಶ್ನಿಸಲಾಗುವುದಿಲ್ಲ. ನಮ್ಮ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು.
ಸಿದ್ದರಾಮಯ್ಯನವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಆದರೆ ಹೈಕಮಾಂಡ್ ಅವರ ಮನವೊಲಿಸುತ್ತದೆ ಎಂಬ ನಂಬಿಕೆ ನಮಗೆಲ್ಲ ಇದೆ ಎಂದು ಹೇಳಿದರು.
ನಾವೆಲ್ಲ ಸೇರಿ ಚುನಾವಣೆ ಮಾಡಿದ್ದೇವೆ. ಈ ಸೋಲಿಗೆ ನಾವೆಲ್ಲರೂ ಜವಾಬ್ದಾರರು. ಚುನಾವಣೆಯಲ್ಲಿ ಹಿನ್ನಡೆಯಾದಾಗ ಬೇಸರವಾಗುವುದು ಸಹಜ. ಸಿದ್ದರಾಮಯ್ಯ ನಮ್ಮ ನಾಯಕರು. ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಯಾಕೆ ಹಿನ್ನಡೆ ಆಗಿದೆ ಎಂದು ಈಗಲ್ಲ, ಮುಂದೆ ಹೇಳುತ್ತೇವೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
Comments are closed.