ಬೆಂಗಳೂರು(ಡಿ.08): ಬುದ್ಧಿಮಾಂದ್ಯ ಮಗಳ ಜೀವನಕ್ಕಾಗಿ ವರ್ಗಾವಣೆ ಕೋರಿ ಕಚೇರಿಯಿಂದ ಕಚೇರಿಗೆ ಅಲಿಯುತ್ತಿದ್ದ ರಾಯಚೂರು ಮೂಲದ ಶಿಕ್ಷಕಿ ಸಮಸ್ಯೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಂದಿಸಿದ್ಧಾರೆ. ಖುದ್ದು ಸುರೇಶ್ ಕುಮಾರ್ ಅವರೇ ಶಿಕ್ಷಕಿಗೆ ಕರೆ ಮಾಡಿ ತಮ್ಮ ಮನವಿಯಂತೆ ವರ್ಗಾವಣೆ ಮಾಡುವುದಾಗಿ ಹೇಳಿದ್ದಾರೆ.
ಹೌದು, ಮಾಧ್ಯಮಗಳಲ್ಲಿ ಶಿಕ್ಷಕಿಯ ಅಳಲು ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಈ ಬೆನ್ನಲೇ ಶಿಕ್ಷಕಿಗೆ ಕರೆ ಮಾಡಿದ ಸುರೇಶ್ ಕುಮಾರ್ ಸಮಸ್ಯೆ ಆಲಿಸಿದ್ದಾರೆ. ಹಾಗೆಯೇ ತಮ್ಮ ಸಮಸ್ಯೆ ಬಗ್ಗೆ ವಿವರವಾಗಿ ಮೇಸೇಜ್ವೊಂದು ಕಳಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ತನಗೆ ಬೇಕಾದ ಕಡೆಗೆ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿರುವ ವಿಚಾರ ಸುರೇಶ್ ಕುಮಾರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ರಾಯಚೂರು ನಗರದ ಜಹೀರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಶಾಂತಾಲಕ್ಷ್ಮಿ ಎಂಬುವರನ್ನು ಮೇಲಾಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿದ್ದರು. ರಾಯಚೂರಿನಿಂದ ಸುಮಾರು 25 ಕಿಲೋ ಮೀಟರ್ ದೂರದ ಮಾಟಮಾರಿ ಎಂಬ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗಾಗಲೇ ಗಂಡನನ್ನು ಕಳೆದುಕೊಂಡಿದ್ದ ಶಿಕ್ಷಕಿ ಮಾತ್ರ ತನ್ನ ಬುದ್ಧಿಮಾಂದ್ಯ ಮಗಳಿಗಾಗಿ ದೀಢೀರ್ ಮಾಡಿದ ವರ್ಗಾವಣೆ ವಿರೋಧಿಸಿ ಪ್ರತಿಭಟಿಸುತ್ತಿದ್ದರು. ತನ್ನ ವರ್ಗಾವಣೆ ಆದೇಶ ಹಿಂಪಡೆಯುವಂತೆ ಮೇಲಾಧಿಕಾರಿಗಳಿಗೆ ಮನವಿಯೂ ಮಾಡಿದ್ದರು.
ಕಡ್ಡಾಯ ವರ್ಗಾವಣೆ ಮಾಡಲು ಶಿಕ್ಷಕರು ಕನಿಷ್ಠ 10 ವರ್ಷ ಒಂದು ಶಾಲೆಯಲ್ಲಿ ಕೆಲಸ ಮಾಡಿರಬೇಕು. ಇಲ್ಲದೇ ಹೋದರೆ ಮೇಲಾಧಿಕಾರಿಗೆ ಶಿಕ್ಷರನ್ನು ಕಡ್ಡಾಯ ವರ್ಗಾವಣೆ ಮಾಡುವ ಅಧಿಕಾರವಿಲ್ಲ. ಆದರೀಗ, ಶಾಂತಲಕ್ಷ್ಮಿ ಎಂಬುವರು 8 ವರ್ಷಗಳಿಂದ ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಹೀಗೆ ಹೇಳದೆ ಕೇಳದೆ ಶಿಕ್ಷಕಿಯನ್ನು ವರ್ಗಾಯಿಸಿದ ಮೇಲಾಧಿಕಾರಿ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕಿ ಮನವಿಗೆ ಸ್ಪಂದಿಸಿದ್ದಾರೆ.
Comments are closed.