ಬೆಳಗಾವಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟುತ್ತೇನೆಂದು ನಂಬಿದ್ದ ಬೆಂಗಳೂರಿನ ಟೆಕ್ಕಿಯೊಬ್ಬನ ಮದುವೆ ಮುರಿದು ಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಸಾಫ್ಟ್ ವೇರ್ ಎಂಜಿನಿಯರಿಗೆ ಬೆಳಗಾವಿ ಜಿಲ್ಲೆಯ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದರೆ ಆಕೆ ಕೆಲವೇ ಕ್ಷಣಗಳಲ್ಲಿ ಟೆಕ್ಕಿಯ ಧರ್ಮ ಪತ್ನಿಯಾಗುತ್ತಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ.
ಮದ್ವೆ ಮಂಟಪದಲ್ಲಿ ನಡೆದಿದ್ದೇನು?
ವರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಚಿಕ್ಕಂದಿನಿಂದಲೂ ಈತನ ಬಲಗೈ ಸ್ವಾಧೀನ ಕಳೆದುಕೊಂಡಿದ್ದು, ಇನ್ಸುಲಿನ್ ತೆಗೆದುಕೊಂಡರೆ ಮಾತ್ರ ಸ್ವಲ್ಪಮಟ್ಟಿಗೆ ಸರಿ ಹೋಗುತ್ತಿತ್ತು. ಇಲ್ಲದಿದ್ದರೆ ಕೈ ಜೋತು ಬೀಳುತ್ತಿತ್ತು. ಈ ವಿಚಾರ ಯಾರಿಗೂ ತಿಳಿಯಬಾರದೆಂದು ಯುವಕ ಉದ್ದ ತೋಳು ಇರುವ ಶರ್ಟ್ ಧರಿಸುತ್ತಿದ್ದನು. ಅಲ್ಲದೆ ತನ್ನ ಕೈಯನ್ನು ಯಾವತ್ತೂ ಪ್ಯಾಂಟ್ ಜೇಬಿನೊಳಗೇ ಇಟ್ಟುಕೊಳ್ಳುತ್ತಿದ್ದನು.
ಇತ್ತೀಚೆಗಷ್ಟೇ ಮ್ಯಾರೇಜ್ ಬ್ಯೂರೋ ಒಂದರ ಮುಖಾಂತರ ಬಯೋಡಾಟ ಪಡೆದುಕೊಂಡು ಯುವತಿಯ ಹೆತ್ತವರನ್ನು ಸಂಪರ್ಕಿಸಿದ್ದನು. ಹೀಗೆ ಮದುವೆ ಮಾತುಕತೆಯೆಲ್ಲಾ ನಡೆಯಿತು. ಆದರೆ ಯುವಕನ ಅಂಗವೈಕಲ್ಯತೆ ಬಗ್ಗೆ ಯುವತಿಯ ಕಡೆಯವರಿಗೆ ತಿಳಿಸಿರಲಿಲ್ಲ. ಹೀಗಾಗಿ ಎರಡೂ ಕಡೆಯವರು ಒಪ್ಪಿ ಮದುವೆ ನಿಶ್ಚಾರ್ಥ ನಡೆದಿತ್ತು.
ಇತ್ತ ಕಳೆದ ಭಾನುವಾರ ಧಾರವಾಡದಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಮದುವೆಗೆ ಸಿದ್ಧತೆಗಳು ಕೂಡ ನಡೆದಿತ್ತು. ದುರಂತ ಅಂದರೆ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದ ವರ ಇನ್ಸುಲಿನ್ ತೆಗೆದುಕೊಳ್ಳಲು ಮರೆತು ಬಿಟ್ಟಿದ್ದಾನೆ. ಹೀಗಾಗಿ ತಾಳಿ ಕಟ್ಟುವ ಸಂದರ್ಭದಲ್ಲಿ ಕೈ ಜೋತು ಬಿದ್ದಿದೆ. ಇದನ್ನು ಕಂಡು ವಧುವಿನ ಕಡೆಯವರು ದಂಗಾಗಿ ಹೋಗಿದ್ದಾರೆ.
ಅಲ್ಲದೆ ಕುಳಿತಲ್ಲಿಂದ ಎದ್ದ ವಧು, ಸತ್ಯ ಮುಚ್ಚಿಟ್ಟು ತನ್ನನ್ನು ಮದುವೆಯಾಗಲು ಹೊರಟ್ಟಿದ್ದ ವರ ಹಾಗೂ ಆತನ ಮನೆಯವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾಳೆ. ಅಲ್ಲಿದೆ ನೀನು ಸುಳ್ಳು ಹೇಳಿದ್ದಿ. ಹೀಗಾಗಿ ನನಗೆ ಈ ಮದುವೆ ಬೇಡ ಎಂದು ಮದುವೆ ಮಂಟಪದಿಂದ ಹೊರ ನಡೆದಿದ್ದಾಳೆ. ಪರಿಣಾಮ ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಕೊನೆಯ ಕ್ಷಣದಲ್ಲಿ ಮುರಿದುಬಿತ್ತು.
ಈ ಸಂಬಂಧ ಪ್ರತಿಕ್ರಿಯಿಸಿರುವ ವಧು, ಮದುವೆಗೆ ಮುಂಚೆ ಆತ ಈ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಖುಷಿಯಿಂದ ನಾನು ಆತನನ್ನು ಮದುವೆಯಾಗುತ್ತಿದ್ದೆ. ಆದರೆ ಆತ ನನ್ನ ಬಳಿ ಸತ್ಯ ಮುಚ್ಚಿಟ್ಟಿದ್ದಾನೆ. ಇದರಿಂದ ಬೇಸರಗೊಂಡು ನಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾಳೆ.
ಮದುವೆಯ ಖರ್ಚು ಮತ್ತು ವಧುವಿನ ಭವಿಷ್ಯದ ದೃಷ್ಟಿಯಿಂದ ಪರಿಹಾರ ರೂಪದಲ್ಲಿ ವರನಿಂದ 12 ಲಕ್ಷ ರೂ. ಹಣವನ್ನು ವಸೂಲಿ ಮಾಡಲಾಗಿದೆ.
Comments are closed.