ಕರ್ನಾಟಕ

ಹೊಸ ದೇಶವನ್ನೇ ಕಟ್ಟಿದ ಅತ್ಯಾಚಾರ ಆರೋಪಿ ನಿತ್ಯಾನಂದ

Pinterest LinkedIn Tumblr


ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಹಲವು ಆಶ್ರಮಗಳ ನಂತರ ಇದೀಗ ತನ್ನದೇ ದೇಶವನ್ನು ಕಟ್ಟಲು ಹೊರಟಿದ್ದಾನೆ.

ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‌ಪೋರ್ಟ್‌‌‌‌ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದಾನೆ.

ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.

ಹಿಂದೆ ಅಫ್ಘಾನಿಸ್ಥಾನ, ಭಾರತ, ನೇಪಾಳ, ಬರ್ಮಾ, ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಕಾಂಬೋಡಿಯಾ ಹಾಗೂ ಇಂಡೋನೇಷಿಯಾ ಸೇರಿದಂತೆ 56 ದೇಶಗಳು ಮುಕ್ತವಾಗಿದ್ದವು. ಆದರೆ ಇದೀಗ ಸಹಸ್ರಮಾನದಿಂದಾಗಿ ಅಳಿವಿನಂಚಿನಲ್ಲಿವೆ ಎಂದು ಹೇಳಿದ್ದಾನೆ.

ಕೈಲಾಸದ ಪಾಸ್‍ಪೋರ್ಟಿನ ಎರಡು ಮಾದರಿಗಳು ಅಂತಿಮವಾಗಿದ್ದು, ಒಂದು ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ. ನಿತ್ಯಾನಂದ ಸಚಿವ ಸಂಪುಟವನ್ನು ಸಹ ರಚಿಸಿದ್ದು, ಮಾ ಎಂಬ ಹೆಸರಿನವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾನೆ. ಅಲ್ಲದೆ ಈ ದೇಶದಲ್ಲಿ ನಿತ್ಯಾನಂದ ಪ್ರತಿ ದಿನ ಸಚಿವ ಸಂಪುಟ ಸಭೆ ನಡೆಸುತ್ತಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೈಲಾಸ ದೇಶದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ವಿಶ್ವದ ಯಾವುದೇ ಮೂಲೆಗಳಿಂದ ಹಿಂದೂಗಳು ಈ ದೇಶಕ್ಕೆ ಬರಬಹುದಾಗಿದೆ. ಕೈಲಾಸದ ಸರ್ಕಾರದಲ್ಲಿ 10 ಇಲಾಖೆಗಳಿದ್ದು, ಒಂದು ಈತನ ಕಚೇರಿ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ, ಸರ್ಕಾರದ ಅಂತರಾಷ್ಟ್ರೀಯ ಸಂಬಂಧ, ಡಿಜಿಟಲ್ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಜಾಲತಾಣ ಪ್ರಮುಖವಾದವುಗಳು. ಉಳಿದಂತೆ ಗೃಹ, ರಕ್ಷಣೆ, ವಾಣಿಜ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಬಗೆಯ ಇಲಾಖೆಗಳನ್ನು ರಚಿಸಿಕೊಂಡಿದ್ದಾನೆ.

ಕೈಲಾಸದ ಕಾನೂನು ತಂಡ ಈ ಜಾಗವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಣೆ ಮಾಡಲು ವಿಶ್ವಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲಿದೆ. ಈ ಅರ್ಜಿಯಲ್ಲಿ ಭಾರತದಲ್ಲಿ ನನಗೆ ಬೆದರಿಕೆ ಇದೆ. ಹೀಗಾಗಿ ಇಲ್ಲಿ ನೆಲೆಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ.

ಭಾರತ ತೊರೆದಿದ್ದು ಹೇಗೆ?
ಪಾಸ್‍ಪೋರ್ಟ್ ಅವಧಿ ಮುಕ್ತಾಯಗೊಂಡಿದ್ದರೂ ಭಾರತ ತೊರೆದಿದ್ದಿ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನೇಪಾಳ ಮೂಲಕ ನಕಲಿ ವೆನೆಜುವೆಲಾ ಪಾಸ್‍ಪೋರ್ಟ್ ಪಡೆದು ಭಾರತವನ್ನು ತೊರೆದಿದ್ದಾನೆ ಎಂದು ವರದಿ ಮಾಡಿದೆ.

Comments are closed.