ಕರ್ನಾಟಕ

ತಡರಾತ್ರಿ ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ ವ್ಯಕ್ತಿಗೆ ಥಳಿತ

Pinterest LinkedIn Tumblr


ಕಲಬುರಗಿ: ಬಾಲಕಿಯರ ಹಾಸ್ಟೆಲ್ ಗೆ ತಡರಾತ್ರಿ ನುಗ್ಗಿದ ವ್ಯಕ್ತಿಯೊಬ್ಬನನ್ನು ಬಾಲಕಿಯರೇ ಹಿಡಿದು ಮುಖಕ್ಕೆ ಖಾರದ ಪುಡಿ ಎರಚಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕಿಯರ ಹಾಸ್ಟೆಲ್ ಗೆ ಶುಕ್ರವಾರ ರಾತ್ರಿ ಕುಡಿದ ಮತ್ತಿನಲ್ಲಿ ವ್ಯಕ್ತಿ ಗೋಡೆಯ ಸಹಾಯದಿಂದ ಒಳ ನುಗ್ಗಿದ್ದಾನೆ. ಗೋಡೆಯ ಮೂಲಕವೇ ಮೂರನೇ ಮಹಡಿಗೆ ಹೋಗಿದ್ದಾನೆ. ಈ ವೇಳೆ ಅನುಮಾನಗೊಂಡ ಯುವತಿಯರು ರೂಮ್ ಗಳಿಂದ ಹೊರ ಬಂದಿದ್ದಾರೆ.

ಆಗ ಆರೋಪಿ ಮೆಟ್ಟಿಲುಗಳ ಮೂಲಕ ಇಳಿದು ಓಡಲು ಯತ್ನಿಸಿದ್ದಾನೆ. ತಕ್ಷಣವೇ ಯುವತಿಯರು ಗುಂಪು ಸೇರಿ ಸೆಕ್ಯುರಿಟಿ ಗಾರ್ಡ್ ನೆರವಿನಿಂದ ಆತನನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಇಷ್ಟರಲ್ಲೇ ಯುವತಿಯೊಬ್ಬಳು ಖಾರದ ಪುಡಿ‌ ತಂದು ಆರೋಪಿಯ ಮುಖಕ್ಕೆ ಎರಚಿದ್ದಾಳೆ. ಇದರಿಂದ ಆತ ಅಲ್ಲೇ ಕುಸಿದು ಬಿದ್ದಿದ್ದು ಎಲ್ಲರ ಸೇರಿಕೊಂಡು ಥಳಿಸಿ ಬುದ್ಧಿ ಕಲಿಸಿದ್ದಾರೆ.‌

ಇದೇ ಸಂದರ್ಭದಲ್ಲಿ ರಾತ್ರಿ ಗಸ್ತುನಲ್ಲಿದ್ದ ಪೊಲೀಸರು ವಿಷಯ ತಿಳಿದು ಹಾಸ್ಟೆಲ್ ಗೆ ತೆರಳಿದ್ದಾರೆ. ಹಾಸ್ಟೆಲ್ ವಾರ್ಡನ್ ಹಾಗೂ ಯುವತಿಯರು ಕೂಡಿಕೊಂಡು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಹಿಡಿದು ಥಳಿಸಿದ ಗಟ್ಟಿಗಿತ್ತಿ ಯುವತಿಯರ ಸಾಹಸ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅವರ ಧೈರ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸತೀಶ್ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು, ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರ ಆತನನ್ನು ವಿಚಾರಣೆ ನಡೆಸಿದ್ದಾರೆ.‌ ಆತ ಕುಡಿದು ನಶೆಯಲ್ಲಿ ಹಾಸ್ಟೆಲ್ ಗೆ ನುಗ್ಗಿದ್ದ. ಆದ್ದರಿಂದ ಎಚ್ಚರಿಕೆ ನೀಡಿ ಆರೋಪಿಯನ್ನು ಬಿಟ್ಟು ಬಿಡಲಾಗಿದೆ ಎಂದು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

Comments are closed.