ಕರ್ನಾಟಕ

ವ್ಯಾಸೆಕ್ಟಮಿ ಶಸ್ತ್ರ ಚಿಕಿತ್ಸೆ ಅಂದರೆ ಪುರುಷರಿಗೆ ಭಯ!

Pinterest LinkedIn Tumblr


ಬೆಂಗಳೂರು: ಜನಸಂಖ್ಯಾ ಸ್ಫೋಟ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ “ನಾನೊಲ್ಲೆ… ನಾನೊಲ್ಲೆ…’ ಎಂದು ಬೆನ್ನು ತೋರಿಸುವ ಪುರುಷರು ಮಹಿಳೆಯರನ್ನು ಮುಂದೆ ಬಿಡುತ್ತಿದ್ದಾರೆ. ಪರಿಣಾಮ ರಾಜ್ಯದಲ್ಲಿ ಮೂರು ವರ್ಷಗಳಿಂದ ವಾರ್ಷಿಕ ಮೂರು ಲಕ್ಷ ಮಹಿಳೆಯರು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಪುರುಷರ ಸಂಖ್ಯೆ ಮೂರಂಕಿಯನ್ನೂ ದಾಟಿಲ್ಲ!

ಪುರುಷರ ಸಂತಾನಶಕ್ತಿ ಹರಣ ಚಿಕಿತ್ಸೆಯಾದ ವ್ಯಾಸೆಕ್ಟಮಿ ಪರಿಚಿತಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಇದರ ಬಗೆಗೆ ಸಾರ್ವಜನಿಕರಿಗೆ ಸ್ಪಷ್ಟ ಅರಿವು ಮೂಡಿಲ್ಲ. ಪುರುಷರ ಲೈಂಗಿಕ ಜೀವನದಲ್ಲಿ ಯಾವುದೇ ತೊಂದರೆಯಾಗದಂತೆ, ಗರ್ಭಧಾರಣೆ ತಡೆಯುವಲ್ಲಿ ಇದು ಶೇ.100ರಷ್ಟು ಪರಿಣಾಮಕಾರಿಯಾದರೂ ರಾಜ್ಯದಲ್ಲಿ ವಾರ್ಷಿಕ ಒಂದು ಸಾವಿರ ಪುರುಷರು ಈ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿಲ್ಲ. ಮಹಿಳೆ ಯರು ವ್ಯಾಪಕವಾಗಿ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಗಾಗುವ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಪುರುಷರ ಈ ನಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಿಯಾಗಿ ಜಾಗೃತಿ ಮೂಡಿಸದಿರುವುದು, ಶಸ್ತ್ರಚಿಕಿತ್ಸೆಯ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ಪುರುಷ ಪ್ರಧಾನ ಮನಸ್ಥಿತಿ ಕಾರಣ ಎನ್ನಲಾಗುತ್ತಿದೆ.

ಬೆರಳೆಣಿಕೆ ಸಾಧನೆ ಮಾಡಿದ ಜಿಲ್ಲೆಗಳು
ರಾಜ್ಯದ ಕೆಲವು ಜಿಲ್ಲೆಗಳು ಪುರುಷರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ತೀರಾ ಹಿಂದುಳಿ ದಿದೆ. ಪ್ರಮುಖವಾಗಿ ಮೂರು ವರ್ಷಗಳಲ್ಲಿ ಹಾವೇರಿಯಲ್ಲಿ 6, ಚಾಮರಾಜನಗರದಲ್ಲಿ 8, ಗದಗದಲ್ಲಿ 14, ಚಿಕ್ಕಮಗಳೂರಿನಲ್ಲಿ 20, ರಾಯಚೂರಿನಲ್ಲಿ 18, ರಾಮನಗರದಲ್ಲಿ 19 ಪುರುಷರು ಮಾತ್ರ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಉಳಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 479, ಬೆಳಗಾವಿ ಯಲ್ಲಿ 340, ಧಾರವಾಡದಲ್ಲಿ 220 ಮಂದಿ ಪುರುಷರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ಜಿಲ್ಲೆಗಳು ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿವೆ. ಉಳಿದಂತೆ ಶಿಕ್ಷಿತರು ಹೆಚ್ಚಿರುವ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ಮೈಸೂರು, ದಕ್ಷಿಣ ಕನ್ನಡ ಸಹಿತ ಹಲವು ಜಿಲ್ಲೆಗಳಲ್ಲಿ ಪುರುಷರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಮೂವತ್ತು ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳಲ್ಲಿ ಸತತ ಮೂರು ವರ್ಷ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಸಂಖ್ಯೆ ಒಂದಂಕಿಯನ್ನೂ ದಾಟಿಲ್ಲ.

2 ವಾರಗಳ ಅಭಿಯಾನ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸದ್ಯ ರಾಜ್ಯದ ಎಲ್ಲೆಡೆ ನ.21ರಿಂದ ಡಿ.4ರ ವರೆಗೆ “ಕುಟುಂಬ ಯೋಜನೆಯಲ್ಲಿ ಭಾಗವಹಿಸಲು ಪುರುಷರಿಗೆ ಈಗ ಲಭಿಸಿದೆ ಸದವಕಾಶ’ ಎಂಬ ಘೋಷವಾಕ್ಯದಲ್ಲಿ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಹಾಗೂ ಜಾಗೃತಿ ಅಭಿಯಾನ ನಡೆಯಲಿದೆ.

ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ವಿದ್ಯಾವಂತ ಪುರುಷರೇ ಮುಂದೆ ಬರುತ್ತಿಲ್ಲ. ಇದರಿಂದ ಅನಗತ್ಯ ಗರ್ಭ ಉಂಟಾಗುವ ಮೂಲಕ ಮಹಿಳೆಯರಿಗೆ ಒತ್ತಡ ಹೆಚ್ಚಾಗುತ್ತಿದೆ. ಅತ್ಯಂತ ಚಿಕ್ಕ ಶಸ್ತ್ರಚಿಕಿತ್ಸೆಯಾಗಿದ್ದು, ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ತಪ್ಪು ಕಲ್ಪನೆ ಬಿಟ್ಟು ಮಹಿಳೆಯರಂತೆ ಪುರುಷರು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು.
– ಡಾ| ರಾಜ್‌ಕುಮಾರ್‌, ಉಪನಿರ್ದೇಶಕರು, ಆರೋಗ್ಯ ಇಲಾಖೆ

Comments are closed.