ಕರ್ನಾಟಕ

ವಿದೇಶಿ ಡ್ರಗ್ ಪೆಡ್ಲರ್‌ ಗಳಿಗೆ ಪ್ರೇಯಸಿಯರೇ ವರದಾನ!

Pinterest LinkedIn Tumblr


ಬೆಂಗಳೂರು: ಮಾದಕವಸ್ತು ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸುತ್ತಿದ್ದಂತೆಯೇ ನೈಜೀರಿಯಾ ಮತ್ತು ಆಫ್ರಿಕಾ ಸೇರಿದಂತೆ ಇನ್ನಿತರೆ ದೇಶಗಳಿಂದ ಬಂದು ನಗರದಲ್ಲಿ ನೆಲೆಯೂರಿರುವ ಡ್ರಗ್ ಪೆಡ್ಲರ್‌ಗಳು ರಂಗೋಲಿ ಕೆಳಗೆ ನುಸುಳಲು ಆರಂಭಿಸಿದ್ದಾರೆ. ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಮಸಾಜ್‌ ಪಾರ್ಲರ್‌ ಹಾಗೂ ಇನ್ನಿತರ ಕಡೆ ಕೆಲಸ ಮಾಡಿಕೊಂಡಿರುವ ಭಾರತೀಯ ಹೆಣ್ಣು ಮಕ್ಕಳ ಜತೆ ಲಿವಿಂಗ್‌ ಟುಗೆದರ್‌ನಲ್ಲಿ ನೆಲೆಸಲು ಶುರು ಮಾಡಿದ್ದಾರೆ.

ಲಿವಿಂಗ್‌ ಟುಗೆದರ್: ವಿಮಾನ ಮತ್ತು ಸಮುದ್ರ ಮಾರ್ಗದಲ್ಲಿಬಂದರು ಪ್ರದೇಶಗಳಿಗೆ ಬಂದಿಳಿಯುವ ನೂರಾರು ಟನ್‌ ಮಾದಕ ವಸ್ತುಗಳು ನಂತರ ರೈಲು ಮತ್ತು ರಸ್ತೆ ಮಾರ್ಗದಲ್ಲಿಬೆಂಗಳೂರು ಸೇರಿದಂತೆ ನಾನಾ ನಗರಗಳನ್ನು ತಲುಪುತ್ತಿವೆ. ಹೀಗಾಗಿ, ನಾನಾ ತನಿಖಾ ಸಂಸ್ಥೆಗಳು ರೈಲು ನಿಲ್ದಾಣ ಸೇರಿದಂತೆ ನಗರ ಪ್ರವೇಶಿಸುವ ಚೆಕ್‌ ಪೋಸ್ಟ್‌ಗಳಲ್ಲಿತೀವ್ರ ನಿಗಾ ಇಟ್ಟಿದ್ದಾರೆ.

ನೈಜೀರಿಯಾ ಪ್ರಜೆಗಳನ್ನು ಎಷ್ಟೇ ತಪಾಸಣೆಗೆ ಒಳಪಡಿಸಿದರೂ ಅವರ ಬಳಿ ನಿರೀಕ್ಷಿತ ಮಟ್ಟದಲ್ಲಿಮಾದಕ ವಸ್ತುಗಳು ಸಿಗುತ್ತಿಲ್ಲ ಎಂಬ ವಿಷಯ ಸಿಸಿಬಿ ಮತ್ತು ಇತರೆ ಸಂಸ್ಥೆಗಳ ಅಧಿಕಾರಿಗಳಿಗೆ ಆಶ್ಚರ್ಯ ಉಂಟುಮಾಡಿತ್ತು. ಆದರೆ, ಅವರ ಕಾಯಂ ಗ್ರಾಹಕರಿಗೆ ಮಾತ್ರ ಬೇಕಾದಷ್ಟು ಮಾದಕ ವಸ್ತುಗಳು ಸಿಗುತ್ತಲೇ ಇತ್ತು. ಈ ಬಗ್ಗೆಮಾಹಿತಿ ಸಂಗ್ರಹಿಸಿದಾಗ ಪೊಲೀಸರಿಗೆ ಶಾಕ್‌ ಕಾದಿತ್ತು. ನೈಜೀರಿಯಾ ಪೆಡ್ಲರ್‌ಗಳು ತಮ್ಮ ಗರ್ಲ್‌ಫ್ರೆಂಡ್‌ಗಳ ಮೂಲಕ ವಿಲೇವಾರಿ ಮಾಡಲು ಶುರು ಮಾಡಿದ್ದಾರೆ. ಒಬ್ಬೊಬ್ಬ ಪೆಡ್ಲರ್‌ ಹಲವು ಯುವತಿಯರ ಜತೆ ಲಿವಿಂಗ್‌ ಟುಗೆದರ್‌ನಲ್ಲಿನೆಲೆಸಿದ್ದು ತಮ್ಮ ದಂಧೆ ಸಲೀಸು ಮಾಡಿಕೊಂಡಿದ್ದಾರೆ.

ಗ್ರಾಂಗಳ ಲೆಕ್ಕದಲ್ಲಿಮಾರಾಟ:
ಪೊಲೀಸರಿಗೆ ಸಿಕ್ಕಿ ಬಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಗರ್ಲ್‌ಫ್ರೆಂಡ್‌ಗಳೂ ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಕಾನೂನಿನ ಪ್ರಕಾರ 5 ಗ್ರಾಂ ಒಳಗೆ ಮಾದಕ ವಸ್ತುಗಳನ್ನು ಇಟ್ಟುಕೊಂಡಿದ್ದರೆ ಅವರ ವಿರುದ್ಧ ಕೇಸು ದಾಖಲಿಸಲು ಅವಕಾಶ ಇಲ್ಲ. ಹೀಗಾಗಿ, 3, 4 ಗ್ರಾಂ ಮಾದಕ ವಸ್ತುಗಳನ್ನೇ ಪೆಡ್ಲರ್‌ಗಳು ತಮ್ಮ ಕಾಯಂ ಗ್ರಾಹಕರಿಗೆ ನೀಡುತ್ತಿದ್ದಾರೆ. ಅಲ್ಲದೆ 4-5 ಗ್ರಾಂ ಮಾದಕ ವಸ್ತುವನ್ನು ದೇಹದೊಳಗೆ ಬಚ್ಚಿಟ್ಟುಕೊಳ್ಳುವುದು ಬಹಳ ಸುಲಭ. ಇದು ಪೆಡ್ಲರ್‌ಗಳಿಗೆ ಅನುಕೂಲವಾಗಿ ಪರಿಣಮಿಸಿದೆ.

ಎಲ್ಲವೂ ಸಲೀಸು: ಮಾದಕ ವಸ್ತು ಜಾಲದಲ್ಲಿತೊಡಗಿಸಿಕೊಂಡಿರುವ ಅಥವಾ ಆ ಅನುಮಾನ ಇರುವ ನೈಜೀರಿಯಾ ಪ್ರಜೆಗಳಿಗೆ ಬಾಡಿಗೆ ಮನೆಗಳು ಸಿಗುತ್ತಿಲ್ಲ. ಡ್ರಗ್‌ ಜಾಲದಲ್ಲಿಇರುವವರು ಬ್ಯಾಂಕ್‌ ಖಾತೆಗಳನ್ನು ತೆರೆಯಲೂ ಸಾಧ್ಯವಾಗುತ್ತಿಲ್ಲ.

ಗರ್ಲ್‌ಫ್ರೆಂಡ್‌ಗಳೇ ವರದಾನ: ಈ ಎಲ್ಲಾಸಮಸ್ಯೆಗಳಿಗೂ ಲಿವಿಂಗ್‌ ಟುಗೆದರ್‌ ವರವಾಗಿ ಪರಿಣಮಿಸಿದೆ. ತಮ್ಮ ಗರ್ಲ್‌ ಫ್ರೆಂಡ್‌ಗಳ ಮೂಲಕ ಮನೆ ಬಾಡಿಗೆ ಹಿಡಿಯುವುದೂ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿದ್ದಾರೆ. ಯಾವ ಪೆಡ್ಲರ್ ಗೆ ಯಾರ್ಯಾರು ಗರ್ಲ್‌ ಫ್ರೆಂಡ್‌ ಗಳಿದ್ದಾರೆ ಎನ್ನುವುದು ಸಿಸಿಬಿ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಗೊತ್ತಾ ದರೂ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸುವುದಕ್ಕೆ ಎಲ್ಲಾ ಕಡೆಗೂ ಮಹಿಳಾ ಸಿಬ್ಬಂದಿಯನ್ನು ಕರೆದೊಯ್ಯುವುದೂ ಸಾಧ್ಯವಾಗುತ್ತಿಲ್ಲ

Comments are closed.