
ಅಥಣಿ: ನಾನು ಅಥಣಿ ಜನತೆಗೆ ಏನೂ ಮಾಡಲಾಗದಿದ್ದರೂ ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸುತ್ತೇನೆ. ನಾನು ಕೊಟ್ಟ ಭಾಷೆಯನ್ನು ಯಾವತ್ತೂ ಉಳಿಸಿಕೊಳ್ಳುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಹೇಳಿದರು.
ಅಥಣಿ ಕಾಂಗ್ರೆಸ್ ಅಭ್ಯರ್ಥಿ ಪರ ಕಕಮರಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ. ಮತ್ತೆ ಬೇರೆ ಕುದುರೆಯನ್ನು ಹತ್ತುತ್ತಿದ್ದಾರೆ. ಮಳ್ಳನ ಹಾಗೆ ಅಂದರೆ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಎಂದರೆ ಮೂರು ಮತ್ತೂಂದು ಎಂದ್ರಂತೆ ಎನ್ನುವ ಹಾಗೆ ನಟಿಸಿ ನಾಟಕ ಮಾಡಿ ಕ್ಷೇತ್ರದ ಜನತೆಗೆ ಅನ್ಯಾಯ ಮಾಡುತ್ತಿರುವ ಮಹೇಶ ಕುಮಟಳ್ಳಿ ಅವರಿಗೆ ಮತದಾರರು ಸರಿಯಾದ ಪಾಠ ಕಲಿಸಬೇಕಿದೆ. ಇವತ್ತು ಹಾಲು ಕುಡಿದ ಮಕ್ಕಳೇ ಬದುಕಲ್ಲ ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ವ್ಯಂಗ್ಯವಾಡಿದರು.
ಯಾವಾಗಲೂ ಜನ್ಮ ಕೊಟ್ಟ ತಾಯಿ ಒಂದು ಕಡೆ ಇದ್ದರೆ ಜಗತ್ತನ್ನು ತೋರಿಸಿದ ತಾಯಿ ಪಕ್ಷ. ಆ ಪಕ್ಷಕ್ಕೆ ಇವರು ಮೋಸ ಮಾಡಿದ್ದಾರೆ. ಕೇಳಿದರೆ ಅನುದಾನ ಕೊಟ್ಟಿಲ್ಲ ಎಂದು ಆರೋಪಿಸುವ ಇವರು ಬಾಯಲ್ಲೇನು ಕಡುಬು ಇಟ್ಟುಕೊಂಡಿದ್ದರಾ? ನಾನು ಓರ್ವ ಹೆಣ್ಣು ಮಗಳಾಗಿ ನನ್ನ ಕ್ಷೇತ್ರಕ್ಕೆ ಸುಮಾರು 1,800 ಕೋ.ರೂ. ಅನುದಾನ ತಂದಿದ್ದೇನೆ. ಅಂಥದರಲ್ಲಿ ನೀವು ಗಂಡಸರು ನನಗಿಂತ ಹೆಚ್ಚು ಅನುದಾನ ತರಬಹುದಿತ್ತು. ಮಳ್ಳರಂತೆ ಸೋಗು ಹಾಕಿ ಕೈಮುಗಿಯುತ್ತಿರುವ ಕುಮಟಳ್ಳಿಯದ್ದು “ಅತಿ ವಿನಯಂ ಚೋರ ಲಕ್ಷಣಂ’ ಎಂದರು.
Comments are closed.