ಕರ್ನಾಟಕ

ಜನತೆಗೆ ಯುಎಡಿಎಐ ನೀಡಿದೆ ಸಿಹಿ ಸುದ್ದಿ : 7 ದಿನವೂ ದೇಶದೆಲ್ಲೆಡೆ ಆಧಾರ್ ಸೇವಾ ಕೇಂದ್ರ ಒಪನ್

Pinterest LinkedIn Tumblr

ಆಧಾರ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿ ಮಾಡಿಸಲು ಸಾಲುಗಟ್ಟಿ ನಿಲ್ಲುತ್ತಿದ್ದ ಸಾರ್ವಜನಿಕರಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಎಡಿಎಐ) ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ವಾರದಲ್ಲಿ 7 ದಿನವೂ ದೇಶದೆಲ್ಲೆಡೆ ಆಧಾರ್ ಸೇವಾ ಕೇಂದ್ರಗಳು ತೆರೆದಿರಲಿವೆ.

ಆಧಾರ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ವಿನಂತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಎಡಿಎಐ) ವಾರದಲ್ಲಿ 7 ದಿನವೂ ಸೇವೆಯನ್ನು ನೀಡಲು ತೀರ್ಮಾನಿಸಿದೆ ಎಂದು ಮಂಗಳವಾರ ತಿಳಿಸಿದೆ.

ಆಧಾರ್ ಕಾರ್ಡ್ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಒಂದು ಸೇವಾ ಕೇಂದ್ರವು ದಿನದಲ್ಲಿ 1000 ಆಧಾರ್ ಕಾರ್ಡ್ ದಾಖಲಾತಿ ಅಥವಾ ನವೀಕರಣ ವಿನಂತಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿವೆ. ಆದರೆ ಸಾರ್ವಜನಿಕರ ವಿನಂತಿಗಳು ದುಪ್ಪಟ್ಟಾಗಿ ಕ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಮೊದಲು ಬಹುತೇಕ ಮಂಗಳವಾರ ಆಧಾರ್ ಸೇವಾ ಕೇಂದ್ರಗಳನ್ನು ಮುಚ್ಚಲಾಗುತ್ತಿತ್ತು.

ಆಧಾರ್ ಸೇವಾ ಕೇಂದ್ರಗಳಲ್ಲಿರುವ ಸೌಲಭ್ಯಗಳು
ಪಾಸ್‌ಪೋರ್ಟ್ ಸೇವಾ ಕೇಂದ್ರ ಮಾದರಿಯಲ್ಲೇ ನಿರ್ಮಿಸಲಾಗಿರುವ ಆಧಾರ್ ಸೇವಾ ಕೇಂದ್ರಗಳಲ್ಲಿ ನೀವು ಆನ್‌ಲೈನ್ ಅಪಾಯಿಂಟ್‌ಮೆಂಟು ಕಾಯ್ದಿರಿಸುವ ಮೂಲಕ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಲು ಯೋಜಿಸಬಹುದು.

ಹೊಸ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಅಥವಾ ದಾಖಲಾತಿ ಮಾಡುವುದರ ಜೊತೆಗೆ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಯುಎಡಿಎಐ ಡೇಟಾಬೇಸ್‌ನಲ್ಲಿ ನವೀಕರಿಸಬಹುದು. ಫೋಟೋ ಮತ್ತು ಬಯೋಮೆಟ್ರಿಕ್ ಡೇಟಾವನ್ನು(ಫಿಂಗರ್ ಪ್ರಿಂಟ್ ಮತ್ತು ಐರಿಸ್) ನವೀಕರಿಸಲು ಸಹ ನಿಮಗೆ ಅನುಮತಿಸಲಾಗಿದೆ.

ಯುಎಡಿಎಐನ ವೆಬ್‌ಸೈಟ್‌ನಲ್ಲಿ ತೋರಿಸಿರುವಂತೆ, ಪ್ರಸ್ತುತ ಕನಿಷ್ಟ 19 ಕ್ರಿಯಾತ್ಮಕ ಆಧಾರ್ ಸೇವಾ ಕೇಂದ್ರಗಳಿವೆ. 2019ರ ಅಂತ್ಯದ ವೇಳೆಗೆ ದೇಶದ 53 ನಗರಗಳ್ಲಿ 114 ಕೇಂದ್ರಗಳನ್ನು ಹೊಂದಲು ಆಧಾರ್ ನೀಡುವ ಸಂಸ್ಥೆ ಯೋಜಿಸಿದೆ.

ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಗಳನ್ನು ಪತ್ತೆ ಹಚ್ಚಲು ಅಥವಾ ಅಪಾಯಿಂಟ್‌ಮೆಂಟು ಕಾಯ್ದಿರಿಸಲು ನೀವು ಯುಎಡಿಎಐ ವೆಬ್‌ಸೈಟ್‌ನ Book an appointment ಪೇಜ್‌ಗೆ ಭೇಟಿ ನೀಡಬೇಕು. ಡ್ರಾಪ್ಡೌನ್ ಮೆನುವಿನಲ್ಲಿ ಪ್ರಸ್ತುತ ಆಧಾರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ಥಳಗಳ ಹೆಸರುಗಳಿವೆ.

ದೆಹಲಿ, ಬೆಂಗಳೂರು, ಪಾಟ್ನಾ, ಹೈದ್ರಾಬಾದ್ ,ಆಗ್ರಾ, ಚೆನ್ನೈ, ಹಿಸಾರ್, ಚಂಡೀಗಡ, ಲಕ್ನೋ, ವಿಜಯವಾಡ, ಭೋಪಾಲ್, ಡೆಹ್ರಾಡೂನ್, ರಾಂಚಿ, ಗುಹವಾಟಿ, ಮೈಸೂರು ಮತ್ತು ಜೈಪುರ ಹೀಗೆ ಹಲವು ಸ್ಥಳಗಳ ಹೆಸರುಗಳಿವೆ. ನಿಮ್ಮ ಆಯ್ಕೆಯ ಕೇಂದ್ರವನ್ನು ನೀವು ಆಯ್ದು ನಿಮ್ಮ ಮೊಬೈಲ್ ನಂಬರ್ ನೀಡುವ ಮೂಲಕ ಅಪಾಯಿಂಟ್‌ಮೆಂಟು ಕಾಯ್ದಿರಿಸಲು ಮುಂದುವರಿಯಬಹುದು.

ಯುಎಡಿಎಐ ದೇಶಾದ್ಯಂತ ಕ್ರಮೇಣ ಆಧಾರ್ ಸೇವಾ ಕೇಂದ್ರಗಳನ್ನು ವಿಸ್ತರಿಸಲು ಮುಂದಾಗಿದೆ. ನಿಮ್ಮ ಹತ್ತಿರ ಯಾವುದೇ ಆಧಾರ್ ಸೇವಾ ಕೇಂದ್ರಗಳು ಇಲ್ಲದಿದ್ದರೆ, ನೀವು ಬ್ಯಾಂಕುಗಳು , ಅಂಚೆ ಕಚೇರಿ, ಬಿಎಸ್‌ಎನ್‌ಎಲ್ ಗ್ರಾಹಕ ಕೇಂದ್ರಗಳು ಮತ್ತು ಇತರೆ ಗೊತ್ತುಪಡಿಸಿದ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ನಡೆಸುತ್ತಿರುವ ಆಧಾರ್ ಕೇಂದ್ರಗಳಿಗೆ ಹೋಗಬಹುದು.

ನಿಮ್ಮ ಹತ್ತಿರದ ಅಂತಹ ಕೇಂದ್ರವನ್ನು ಹುಡುಕಲು, ನೀವು ಯುಎಡಿಎಐನ ವೆಬ್‌ಸೈಟ್‌ಗೆ ಭೇಟಿ ನೀಡಿ ‘ದಾಖಲಾತಿ ಕೇಂದ್ರವನ್ನು ಪತ್ತೆ ಮಾಡಿ'(Locate an enrolment center) ಪೇಜ್‌ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ರಾಜ್ಯ, ಪಿನ್ ಕೋಡ್ ಅಥವಾ ನಿಮ್ಮ ಪ್ರದೇಶ, ನಗರ ಅಥವಾ ಜಿಲ್ಲೆಯ ಹೆಸರನ್ನು ನಮೂದಿಸುವ ಮೂಲಕ ಆಧಾರ್ ಸೇವಾ ಕೇಂದ್ರವನ್ನು ಹುಡುಕಬಹುದು.

 

 

 

 

Comments are closed.