
ಬೆಂಗಳೂರು (ನ. 16): ಬಿಡದಿಯ ನಿತ್ಯಾನಂದನ ಆಶ್ರಮದ ಕಾಮಕಾಂಡಗಳು ಒಂದೊಂದಾಗಿಯೇ ಹೊರಬೀಳುತ್ತಿವೆ. ತನ್ನ ಮಕ್ಕಳನ್ನು ನಿತ್ಯಾನಂದನ ಗುರುಕುಲದಲ್ಲಿ ಸೇರಿಸಿದ್ದ ಆಶ್ರಮದ ಶಿಷ್ಯನೇ ಇದೀಗ ತಿರುಗಿಬಿದ್ದಿದ್ದು, ತನ್ನ ಮಗಳನ್ನು ಆಶ್ರಮದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ. ಆಕೆ ಈಗ ನಾಪತ್ತೆಯಾಗಿದ್ದಾಳೆ. ಇದೆಲ್ಲದಕ್ಕೂ ನಮಗೆ ಉತ್ತರ ಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಆ ಯುವತಿಯ ತಂದೆಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಿತ್ಯಾನಂದನ ಶಿಷ್ಯರೊಬ್ಬರು ತಮ್ಮ ನಾಲ್ವರು ಮಕ್ಕಳನ್ನು ಬಿಡದಿ ಆಶ್ರಮದಲ್ಲಿ ಬಿಟ್ಟಿದ್ದರು. ಆದರೆ, ಅವರಲ್ಲಿ 18 ವರ್ಷದ ಮಗಳನ್ನು ಅಹಮದಾಬಾದ್ ಆಶ್ರಮಕ್ಕೆ ವರ್ಗಾಯಿಸಲಾಗಿದೆ. ಆಕೆಯನ್ನು ನೋಡಲು ಪೋಷಕರು ಅಹಮದಾಬಾದ್ಗೆ ಹೋದರೆ ಅಲ್ಲಿ ಕೂಡ ಆ ಯುವತಿ ಸಿಕ್ಕಿಲ್ಲ. ತಮ್ಮ ಮಗಳು ನಾಪತ್ತೆಯಾಗಿರುವುದಕ್ಕೆ ಕಂಗಾಲಾಗಿರುವ ಯುವತಿಯ ಪೋಷಕರು ಆಕೆಯನ್ನು ಆಶ್ರಮದ ಸಿಬ್ಬಂದಿ ಕೆಟ್ಟದಾಗಿ ಬಳಸಿಕೊಂಡಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಯುವತಿಯ ತಂದೆ, ನಿತ್ಯಾನಂದ ಆಶ್ರಮದಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ಭದ್ರತೆ ಇಲ್ಲ. ನನ್ನ ಮಕ್ಕಳನ್ನು ನನ್ನ ಅನುಮತಿ ಇಲ್ಲದೆ ಹೇಗೆ ಬೆಂಗಳೂರಿನಿಂದ ಅಹಮದಾಬಾದ್ಗೆ ಶಿಫ್ಟ್ ಮಾಡಿದರು? ಈ ಮೊದಲು ಈ ರೀತಿಯ ಅನೇಕ ಘಟನೆಗಳು ಇಲ್ಲಿ ನಡೆದಿದ್ದನ್ನು ಕೇಳಿದ್ದೆ. ಈಗ ನನಗೇ ಈ ಅನುಭವವಾಗಿದೆ. ನಿತ್ಯಾನಂದ ಗುರುಕುಲ ಬಹಳ ದೊಡ್ಡ ಶಿಕ್ಷಣ ಸಂಸ್ಥೆಯೆಂದು ಇಲ್ಲಿ ಮಗಳನ್ನು ಓದಲು ಬಿಟ್ಟಿದ್ದೆ. ಆದರೀಗ ಆಕೆ ನಾಪತ್ತೆಯಾಗಿದ್ದಾಳೆ. ಆಕೆ ಎಲ್ಲಿ ಹೋಗಿದ್ದದಾಳೆಂದು ಗೊತ್ತಿಲ್ಲ. ಆಕೆಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಆಕೆ ಎಲ್ಲಿ ಬೇಕಾದರೂ ಹೋಗಬಹುದು ಎಂದು ಹೇಳುತ್ತಿದ್ದಾರೆ. ನಿತ್ಯಾನಂದನ ಆಶ್ರಮದ ಒಳಗೆ ಸಾಕಷ್ಟು ರಹಸ್ಯಗಳು ಇವೆ. ನಿತ್ಯಾನಂದ ಈ ಬಗ್ಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ.
ಕತೆಯಲ್ಲಿ ಮತ್ತೊಂದು ಟ್ವಿಸ್ಟ್:
ಸ್ವಘೋಷಿತ ದೇವಮಾನವ ನಿತ್ಯಾನಂದನ ಶಿಷ್ಯನ ಮಗಳು ಮಾ ನಿತ್ಯ ನಂದಿತಾ ಬಿಡದಿಯ ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಆಕೆಯ ಜೊತೆಗೆ ಆಕೆಯ ಇಬ್ಬರು ಅಕ್ಕ-ತಂಗಿಯರು ಮತ್ತು ತಮ್ಮ ಕೂಡ ಬೆಂಗಳೂರಿನ ಬಿಡದಿ ಗುರುಕುಲದಲ್ಲಿದ್ದರು. ತನ್ನ ತಂದೆ-ತಾಯಿ ಅಹಮದಾಬಾದ್ನಲ್ಲಿರುವ ಆಶ್ರಮದ ಬಳಿ ಬಂದಿರುವ ವಿಚಾರವನ್ನು ತಿಳಿದ ಯುವತಿ ಆಶ್ರಮದ ಒಳಗಿಂದಲೇ ಸೆಲ್ಫೀ ವಿಡಿಯೋ ಮಾಡಿ ಕಳುಹಿಸಿದ್ದಾಳೆ. ಆ ವಿಡಿಯೋದಲ್ಲಿರುವ ವಿಚಾರಕ್ಕೂ ಯುವತಿಯ ತಂದೆ ಹೇಳುತ್ತಿರುವ ವಿಚಾರಕ್ಕೂ ಬಹಳ ವ್ಯತ್ಯಾಸಗಳಿವೆ.
ಸೆಲ್ಫೀ ವಿಡಿಯೋ ಮಾಡಿ ಕಳುಹಿಸಿದ್ದ ಮಾ ನಿತ್ಯ ನಂದಿತಾ, ಬಿಡದಿ ಆಶ್ರಮದಲ್ಲಿ ಶಂಕರಾನಂದ ಎಂಬ ಶಿಷ್ಯ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನನ್ನ ತಾಯಿಯ ಅರ್ಧದಷ್ಟು ವಯಸ್ಸಾಗಿರುವ ಆತನಿಂದ ನನಗೆ ಜೀವ ಬೆದರಿಕೆಯೂ ಇದೆ. ಆತ ಈಗ ಒಳ್ಳೆಯವನಂತೆ ಸೋಗು ಹಾಕಿಕೊಂಡು ನನ್ನ ಅಪ್ಪ-ಅಮ್ಮನ ಜೊತೆ ಸೇರಿಕೊಂಡಿದ್ದಾನೆ. ನಾನು ಆಶ್ರಮದ ಒಳಗೇ ಸುರಕ್ಷಿತವಾಗಿದ್ದೇನೆ. ಹೊರಗೆ ಬಂದರೆ ಶಂಕರಾನಂದ ಮತ್ತೆ ಲೈಂಗಿಕ ಕಿರುಕುಳ ನೀಡುತ್ತೇನೆ. ಅಪ್ಪ-ಅಮ್ಮ ಶಂಕರಾನಂದನ ಜೊತೆ ಇರುವಾಗ ನಾನೇಕೆ ಆಶ್ರಮದಿಂದ ಹೊರಗೆ ಬರಬೇಕು? ಎಂದು ಕೇಳಿದ್ದಾಳೆ.
ಆ ವಿಡಿಯೋ ನೋಡುತ್ತಿದ್ದಂತೆ ಯುವತಿಯ ತಂದೆ ಮತ್ತೆ ಪ್ರತಿಕ್ರಿಯಿಸಿದ್ದು, ನನ್ನ ಮಗಳು ತನ್ನ ಜೊತೆಗೆ ಆಶ್ರಮದ ಕೆಲವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವಿಡಿಯೋ ಮಾಡಿದ್ದಳು. ಈ ವಿಷಯವನ್ನು ಹೇಳಲು ನನಗೆ ಮುಜುಗರವಾಗುತ್ತಿದೆ. ಆಕೆ ಈಗ ಕಾಣುತ್ತಿಲ್ಲ. ಆಕೆ ಆರೋಪ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆಯೇ? ಎಂದು ಯುವತಿಯ ತಂದೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಬಿಡದಿ ಆಶ್ರಮದಿಂದ ಇದ್ದಕ್ಕಿದ್ದಂತೆ ಗುಜರಾತ್ನ ಅಹಮದಾಬಾದ್ ಆಶ್ರಮಕ್ಕೆ ಶಿಫ್ಟ್ ಮಾಡಲಾದ ಆ ಯುವತಿ ಎಲ್ಲಿದ್ದಾಳೆ? ಎಂಬುದು ಇನ್ನೂ ಗೊತ್ತಾಗಿಲ್ಲ. ಆಕೆ ಯಾವುದೋ ಟೂರ್ಗೆ ಹೋಗಿದ್ದಾಳೆ ಎಂದು ಗುರುಕುಲದ ಸಿಬ್ಬಂದಿ ಹೇಳುತ್ತಿದ್ದಾರೆ. ಹಾಗಾದರೆ, ಆಕೆ ಎಲ್ಲಿ ಹೋಗಿದ್ದಾಳೆಂಬ ಬಗ್ಗೆಯೂ ಮಾಹಿತಿ ಇಲ್ಲದ ಗುರುಕುಲದವರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೇ? ಎಂದು ಆಕೆಯ ತಂದೆ ಪ್ರಶ್ನಿಸಿದ್ದಾರೆ. ಇನ್ನು ನಾನು ಸುಮ್ಮನಿರುವುದಿಲ್ಲ, ಮಾನವ ಹಕ್ಕು ಆಯೋಗಕ್ಕೂ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆದರೆ, ಆ ಯುವತಿ ಬೇರೆಯದೇ ಕತೆ ಹೇಳುತ್ತಿರುವುದರಿಂದ ಯಾವುದು ನಿಜ, ಯಾವುದು ಸುಳ್ಳು, ಯಾರು ಅಪರಾಧಿಗಳು ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದೆ.
Comments are closed.