ಕಲಬುರ್ಗಿ: ಮೊಬೈಲ್ ಫೋನ್ಗಳ ಬಳಕೆ ಹೆಚ್ಚಾದಂತೆ ಮನುಷ್ಯವೇ ಕಡಿಮೆಯಾಗುತ್ತಿದೆ ಎಂಬ ಆಕ್ರೋಶ ಬಹಳ ಸಮಯದಿಂದಲೂ ಕೇಳಿಬರುತ್ತಿವೆ. ಅಪಘಾತದಿಂದ ರಸ್ತೆ ಮೇಲೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವರಿಗೆ ಒಂದು ಹನಿ ನೀರು ಕೊಡಲೂ ಹಿಂದೇಟು ಹಾಕಿ ಆ ವ್ಯಕ್ತಿ ರಸ್ತೆಯಲ್ಲಿ ರಕ್ತಸ್ರಾವದಿಂದ ಸಾಯುವ ಕ್ಷಣವನ್ನು ವಿಡಿಯೋ ಮಾಡಿ ಅದನ್ನು ಯೂಟ್ಯೂಬ್, ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದ ಅನೇಕ ಘಟನೆಗಳು ನಡೆದಿದ್ದವು. ಆದರೆ, ತಮ್ಮ ಜೊತೆಗಿದ್ದ ಸ್ನೇಹಿತನೇ ಸಾಯುವಾಗಲೂ ಆತನಿಗೆ ಸಹಾಯ ಮಾಡದೆ ಸ್ನೇಹಿತನ ಸಾವಿನ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಅಮಾನವೀಯ ಘಟನೆ ಗುಲ್ಬರ್ಗದಲ್ಲಿ ನಡೆದಿದೆ.
ಕಲಬುರ್ಗಿಯ ರುಕ್ಮೊದ್ದೀನ್ ಕಲ್ಲಿನ ಗಣಿಯಲ್ಲಿ ಈ ಘಟನೆ ನಡೆದಿದೆ. ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾಯುತ್ತಿದ್ದರೂ ಆತನನ್ನು ಬದುಕಿಸದ ಗೆಳೆಯರು ಆತನ ಸಾವಿನ ಕ್ಷಣವನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಘಟನೆ ಗುಲ್ಬರ್ಗದಲ್ಲಿ ನಡೆದಿದೆ. ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಗೆಳೆಯರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ. ಸ್ನೇಹಿತ ನೀರಿನಲ್ಲಿ ಮುಳುಗುತ್ತಿದ್ದರೂ ಆತನನ್ನು ಕಾಪಾಡಲು ಪ್ರಯತ್ನಿಸುವ ಬದಲು ವಿಡಿಯೋ ಮಾಡುತ್ತಲೇ ಗೆಳೆಯರು ಕಾಲಹರಣ ಮಾಡಿದ್ದಾರೆ.
22 ವರ್ಷದ ಜಾಫರ್ ಅಯೂಬ್ ನೀರಿನಲ್ಲಿ ಈಜಲು ಕೆರೆಗೆ ಇಳಿದಿದ್ದ. ಆಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ದಂಡೆಯ ಮೇಲಿದ್ದ ಇಬ್ಬರು ಗೆಳೆಯರು ಆತನನ್ನು ಕಾಪಾಡುವ ಬದಲು ವಿಡಿಯೋ ಮಾಡುತ್ತ ಕಾಲಹರಣ ಮಾಡಿದ್ದಾರೆ. ಇದರಿಂದ ನೋಡನೋಡುತ್ತಿದ್ದಂತೆ ಜಾಫರ್ ನೀರುಪಾಲಾಗಿದ್ದಾನೆ. ಆತ ಮುಳುಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.

Comments are closed.