ಕರ್ನಾಟಕ

ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಣೆ: ಬಿಜೆಪಿಯಲ್ಲಿ ಬಂಡಾಯದ ಬಿಸಿ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕೆಲವು ಕ್ಷೇತ್ರಗಳಲ್ಲಿ ಬಹಿರಂಗವಾಗಿ ಬಂಡಾಯ ಸ್ಫೋಟಗೊಂಡಿದೆ.

ರಾಣೆಬೆನ್ನೂರಿನಲ್ಲಿ ಆರ್.ಶಂಕರ್ ಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ, ತನಗೆ ಟಿಕೆಟ್ ನೀಡಬೇಕೆಂದು ಶಿವರಾಜ್ ಸಜ್ಜನ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬೆಳವಣಿಗೆ ನಡುವೆಯೇ ಅನರ್ಹ ಶಾಸಕ ಆರ್.ಶಂಕರ್ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ನಲ್ಲಿ ಅಸಮಾಧಾನ ಸ್ಫೋಟ:

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬಿಬಿಎಂಪಿ ಮಾಜಿ ಉಪಮೇಯರ್ ಹರೀಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹರೀಶ್ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಹರೀಶ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

ಶಿವಾಜಿನಗರದಲ್ಲಿ ರೋಷನ್ ಬೇಗ್ ಬಂಡಾಯ:

ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿರುವ ನಿಟ್ಟಿನಲ್ಲಿ ರೋಷನ್ ಬೇಗ್ ಕೂಡಾ ಅಸಮಾಧಾನಗೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಪ್ತ ಮುಖಂಡರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಶಿವಾಜಿನಗರ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಘೋಷಿಸಿರಲಿಲ್ಲವಾಗಿತ್ತು. ನಂತರ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಎಂ.ಶರವಣ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿತ್ತು.

Comments are closed.