ಕರ್ನಾಟಕ

ಅಯೋಧ್ಯಾ ತೀರ್ಪಿಗೆ ಕಾಮೆಂಟ್ ಪೋಸ್ಟ್ ಮಾಡುವಾಗ 12 ನಿಯಮ ಪಾಲಿಸಿ!

Pinterest LinkedIn Tumblr


ಬೆಂಗಳೂರು: ಬಹುನಿರೀಕ್ಷಿತ ಅಯೋಧ್ಯಾ ತೀರ್ಪು ಪ್ರಕಟವಾಗಿದೆ. ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್ ಸಾರಥ್ಯದ ಪಂಚ ಸದಸ್ಯ ಸಾಂವಿಧಾನಿಕ ಪೀಠ ನೀಡಿರುವ ಈ ತೀರ್ಪು, ಶತಮಾನದ ಮಹಾ ತೀರ್ಪು ಎಂದೇ ಬಿಂಬಿತವಾಗಿದೆ. ಅಯೋಧ್ಯಾ ಪ್ರಕರಣದ ತೀರ್ಪು ಹೊರಬಿದ್ದಿರುವ ಈ ಸಮಯದಲ್ಲಿ, ದೇಶದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಅನ್ನೋ ಕಾರಣಕ್ಕಾಗಿ ಗೃಹ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ದೇಶದ ಹೊರಗಿನ ಹಾಗೂ ದೇಶದ ಒಳಗಿನ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಪೊಲೀಸರು ಸನ್ನದ್ಧರಾಗಿರುವ ಜೊತೆಯಲ್ಲೇ, ಇಂಟರ್‌ನೆಟ್‌ನಲ್ಲಿ ನಡೆಯುವ ಕಿಡಿಗೇಡಿತನವನ್ನೂ ಮಟ್ಟ ಹಾಕಲು ಸೈಬರ್‌ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಿ, ಜಾಗೃತ ನಾಗರಿಕರಾಗಿ ನಾವೂ ಕೂಡಾ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಬೇಕು. ಇಂಟರ್‌ನೆಟ್‌ ಲೋಕದಲ್ಲಿ ಪ್ರವೇಶ ಪಡೆದಾಗ, ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಪಾಲಿಸಲೇಬೇಕಿದೆ. ಇಲ್ಲವಾದ್ರೆ ಜೈಲೂಟ ಕಟ್ಟಿಟ್ಟ ಬುತ್ತಿ!

ಸೋಷಿಯಲ್ ಮೀಡಿಯಾಗಳಲ್ಲಿ ನೀವು ಪಾಲಿಸಲೇಬೇಕಾದ ನಿಯಮಗಳು:
1 – ಯಾವುದೇ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಬೇಡಿ
2 – ಪ್ರಚೋದನಕಾರಿ ವಿಡಿಯೋಗಳನ್ನು ಹಾಕಬೇಡಿ
3 – ರಾಜಕೀಯ, ಧಾರ್ಮಿಕ ನಿಂದನಾತ್ಮಕ ಸಂದೇಶ ಹಾಕಬೇಡಿ
4 – ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳನ್ನು ಹರಡಬೇಡಿ
5 – ನಿಮಗೆ ಸಿಕ್ಕ ಯಾವುದೇ ಸುದ್ದಿಯನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳದೇ ಬೇರೆಯವರಿಗೆ ರವಾನಿಸಬೇಡಿ
6 – ವದಂತಿಗಳನ್ನು ಹರಡುವ ದುಸ್ಸಾಹಸಕ್ಕೆ ಕೈಹಾಕಬೇಡಿ
7 – ಸಂತಸ, ಬೇಸರ ವ್ಯಕ್ತಪಡಿಸುವಾಗ ನಿಂದನಾತ್ಮಕ ಪದ ಪ್ರಯೋಗ, ಆಕ್ಷೇಪಾರ್ಹ ವಿಚಾರ ಪ್ರಸ್ತಾಪ ಮಾಡಬೇಡಿ
8 – ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಳ್ಳಬೇಡಿ
9 – ನ್ಯಾಯಾಲಯದ ತೀರ್ಪಿಗೆ ನಿಂದನಾತ್ಮಕ, ಆಕ್ಷೇಪಾರ್ಹ ಪದ ಪ್ರಯೋಗ ಮಾಡಬೇಡಿ
10 – ನಿಮ್ಮ ಮಕ್ಕಳು, ಸಂಬಂಧಿಕರು, ನೆರೆಹೊರೆಯವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದರೆ ಎಚ್ಚರಿಕೆ ನೀಡಿ
11 – ವಾಟ್ಸಪ್ ಗುಂಪುಗಳ ಅಡ್ಮಿನ್ ಆಗಿದ್ದರೆ ಕಿಡಿಗೇಡಿಗಳನ್ನು ಗುಂಪಿನಿಂದ ಕಿತ್ತುಹಾಕಿ
12 – ವಾಟ್ಸಪ್, ಫೇಸ್‌ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳ ಗುಂಪುಗಳಲ್ಲಿ ಮುನ್ನೆಚ್ಚರಿಕಾ ಸಂದೇಶ ಹಂಚಿಕೊಳ್ಳಿ

ಅಯೋಧ್ಯಾ ತೀರ್ಪು ತುಂಬಾ ಗಂಭೀರವಾದ, ಸಂಕೀರ್ಣವಾದ, ಕೋಮು ಸೂಕ್ಷ್ಮ ವಿಚಾರ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣದೊಂದು ಲೋಪ ನಿಮ್ಮಿಂದ ಆದ್ರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ. ವಾರಂಟ್‌ ಇಲ್ಲದೆಯೇ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ. ಸೈಬರ್ ಕ್ರೈಂ ಪೊಲೀಸರೂ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.

Comments are closed.