ಕರ್ನಾಟಕ

ಮಾಜಿ ಶಾಸಕನ ವಿರುದ್ಧ ದೂರು ನೀಡಿದ್ದ ಮಹಿಳೆ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು(ನ. 03): ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಾಬುರಾವ್ ಚಿಂಚನಸೂರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ಅಂಜನಾ ವಿ. ಶಾಂತವೀರ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇನೆ ಎಂದು ಮಗನಿಗೆ ದೂರವಾಣಿ ಕರೆ ಮಾಡಿದ ಈ ಮಹಿಳೆ ಚಂದ್ರಲೇಔಟ್​ನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಸಾವಪ್ಪಿದ್ದಾರೆ.

ಬಾಬುರಾವ್ ಚಿಂಚನಸೂರ ಅವರಿಗೆ ಅಂಜನಾ ವಿ. ಶಾಂತವೀರ 2011ರಲ್ಲಿ 11 ಕೋಟಿ ರೂ ಸಾಲ ನೀಡಿದ್ದಾಗಿ ಹೇಳಿಕೊಂಡಿದ್ದರು. ಮಾಜಿ ಸಚಿವರಿಂದ ತಮಗೆ ಹಣ ವಾಪಸ್ಸಾಗಿಲ್ಲ ಎಂದು ಈಕೆ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಬಾಬುರಾವ್ ಅವರು ನೀಡಿದ್ದ ಚೆಕ್​ಗಳು ಬೌನ್ಸ್ ಆಗಿವೆ ಎಂದು ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವಿತ್ತು. ಆದರೆ, ಕೊರ್ಟ್​ನಲ್ಲಿ ಈ ಪ್ರಕರಣ ಇತ್ಯರ್ಥ ಆಗಿರಲಿಲ್ಲ. ಪದೇ ಪದೇ ಕೋರ್ಟ್​ಗೆ ಹಾಜರಾಗುತ್ತಿದ್ದ ಅಂಜನಾ ಅವರು ತೀವ್ರ ಹತಾಶಗೊಂಡಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಅಂಜನಾ ಅವರು ಗುರುವಾರವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಚಂದ್ರ ಲೇಔಟ್​ ಪೊಲೀಸ್ ಠಾಣೆಯಲ್ಲಿ ಅವರ ಮಗ ದೂರು ನೀಡಿದ್ದಾರೆ. ಶುಕ್ರವಾರವೇ ಅಂತ್ಯಕ್ರಿಯೆ ಮಾಡಲಾಗಿದೆ. ಈ ಪ್ರಕರಣ ಹೊರಗೆ ಪ್ರಚಾರವಾಗಬಾರದೆಂಬ ಉದ್ದೇಶದಿಂದ ಬೇಗನೇ ಅಂತ್ಯಕ್ರಿಯೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಬಾಬುರಾವ್ ಅವರು ಕಳೆದ ವರ್ಷವಷ್ಟೇ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಬಿಜೆಪಿ ಸೇರುವ ಮುನ್ನ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್​ನಲ್ಲಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಎದುರು ಸೋಲಪ್ಪಿದ್ದರು.

11 ಕೋಟಿ ರೂ ಸಾಲ ಪಡೆದ ವಿಚಾರದಲ್ಲಿ ಅಂಜನಾ ಅವರ ಆರೋಪವನ್ನು ಬಾಬುರಾವ್ ಅವರು ಸಾರಾಸಗಟಾಗಿ ನಿರಾಕರಿಸಿದ್ದರು. ಆಕೆಯ ಆರೋಪದ ವಿರುದ್ಧವೇ ತಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು.

Comments are closed.