ಕರ್ನಾಟಕ

ಕನ್ನಡ ಧ್ವಜ ಇಲ್ಲದೇ ರಾಜ್ಯೋತ್ಸವ ಆಚರಣೆ; ಭಾರೀ ಜನಾಕ್ರೋಶ

Pinterest LinkedIn Tumblr


ನವೆಂಬರ್ 1 ಕನ್ನಡಿಗರ ಹಬ್ಬ. ಕನ್ನಡ ನಾಡಿನ ಜನರನ್ನು ಭಾಷೆ ಮತ್ತು ಕೆಂಪು ಹಳದಿ ಬಾವುಟದಿಂದ ಬೆಸೆಯುವ ಹಬ್ಬ. ಕಳೆದ ಐದು ದಶಕದಿಂದ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಈ ಹಬ್ಬದಲ್ಲಿ ನಾಡ ಬಾವುಟಕ್ಕೆ ತನ್ನದೇ ಆದ ವಿಶೇಷತೆ ಹಾಗೂ ಪ್ರಾಮುಖ್ಯತೆ ಇದೆ. ಆದರೆ, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಾಡ ಬಾವುಟ ಇಲ್ಲದೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಾಕ್ಷಿಯಾಗಿರುವುದು ಇದೀಗ ರಾಜ್ಯಾದ್ಯಂತ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಅಸಲಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಬಾರದು, ರಾಷ್ಟ್ರಧ್ವಜ ಇರುವಾಗ ಪ್ರಾದೇಶಿಕ ಬಾವುಟಗಳಿಗೆ ಮಾನ್ಯತೆ ಇಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಕಳೆದ ಎರಡು ವರ್ಷದಿಂದ ಖ್ಯಾತೆ ತೆಗೆಯುತ್ತಲೇ ಇದೆ. ಆದರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಧ್ವಜ ರಚನೆಗೆ ಸಮಿತಿ ರಚಿಸಿ ನೂತನ ಧ್ವಜವನ್ನು ವಿನ್ಯಾಸಗೊಳಿಸಿದ್ದರು. ಅಲ್ಲದೆ, ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಬಾವುಟ ಹಾರಿಸುವುದು ಕನ್ನಡಿಗರ ಹಕ್ಕು ಎಂದು ಪ್ರತಿಪಾದಿಸಿದ್ದರು.

ಆದರೆ, ಆರಂಭದಿಂದಲೂ ಇದಕ್ಕೆ ಬಿಜೆಪಿ ನಾಯಕರ ವಿರೋಧ ಇತ್ತು. ಹೀಗಿದ್ದಾಗ್ಯೂ ಸಿಎಂ ಯಡಿಯೂರಪ್ಪ ಹಾಗೂ ಸಚಿವ ವಿ. ಸೋಮಣ್ಣ ಕನ್ನಡ ರಾಜ್ಯೋತ್ಸವದ ದಿನದಂದು ರಾಜ್ಯಾದ್ಯಂತ ಮೊದಲು ರಾಷ್ಟ್ರಧ್ವಜ ಹಾರಿಸಿ ನಂತರ ನಾಡಧ್ವಜ ಹಾರಿಸಬೇಕು ಎಂದು ಆದೇಶ ನೀಡಿದ್ದರು. ಆದರೆ, ಈ ಆದೇಶವನ್ನು ಸ್ವತಃ ಸರ್ಕಾರದ ಭಾಗವಾಗಿರುವ ಸಚಿವರೇ ಗೌರವಿಸದೆ ನಾಡಹಬ್ಬವನ್ನು ಅವಮಾನಿಸಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲೂ ಉಸ್ತುವಾರಿ ಸಚಿವರುಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಈವರೆಗೆ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ನಾಡಧ್ವಜವನ್ನು ಹಾರಿಸಲಾಗಿಲ್ಲ. ರಾಜಧಾನಿಯ ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರೇನೋ ಮೊದಲು ರಾಷ್ಟ್ರಧ್ವಜ ಹಾರಿಸಿ ನಂತರ ನಾಡಧ್ವಜ ಹಾರಿಸಿ ಕನ್ನಡಾಂಭೆಯನ್ನು ಗೌರವಿಸಿದ್ದರು. ಇನ್ನೂ ಗದಗ ಹಾಗೂ ಮೈಸೂರಿನಲ್ಲೂ ಇದೇ ಕ್ರಮವನ್ನು ಅನುಸರಿಸಲಾಗಿತ್ತು.

ಆದರೆ, ಬೀದರ್, ಬಾಗಲಕೋಟೆ, ಹಾಸನ, ರಾಯಚೂರು, ಉಡುಪಿ, ಶಿವಮೊಗ್ಗ, ರಾಮನಗರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಲಾಗಿದೆ. ಈ ಯಾವ ಜಿಲ್ಲೆಯಲ್ಲೂ ಕನ್ನಡ ಧ್ವಜ ಹಾರಿಸಲಾಗಿಲ್ಲ.

ಅಲ್ಲದೆ, ಬಾಗಲಕೋಟೆಯಲ್ಲಿ ಮತ್ತು ರಾಮನಗರ ಜಿಲ್ಲೆಗಳಲ್ಲಿ ಖುದ್ದು ಉಪ ಮುಖ್ಯಮಂತ್ರಿಗಳಾಗಿ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ ನಾಡಧ್ವಜ ಹಾರಿಸಲು ಹಿಂದೇಟು ಹಾಕಿದ್ದಾರೆ. ಇನ್ನೂ ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ, ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಹಾಗೂ ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ. ರವಿ ರಾಷ್ಟ್ರಧ್ವಜ ಮಾತ್ರ ಹಾರಿಸಿ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡ ಬಾವುಟ ಕಂಗೊಳಿಸಬೇಕಾಗಿದ್ದ ದಿನದಂದು ರಾಜ್ಯ ಸರ್ಕಾರ ಕನ್ನಡ ಬಾವುಟವನ್ನೇ ಹಾರಿಸದಿರುವುದು ಇದೀಗ ಹಲವಾರು ಚರ್ಚೆ ಮತ್ತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಹೀಗೆ ಕನ್ನಡ ಬಾವುಟ ಇಲ್ಲದೆ ರಾಜ್ಯೋತ್ಸವ ಆಚರಿಸಿ ನಾಡಿಗೆ ಅಪಮಾನ ಎಸಗಿದೆ ಎಂದು ಕೆಲವರು ಈಗಾಗಲೇ ಟೀಕಾಪ್ರಹಾರ ನಡೆಸಿದ್ದಾರೆ. ಹೀಗಾಗಿ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.