ಕರ್ನಾಟಕ

ರೈತರ ಹತ್ತಿರ ತೆರಳಿ ಸಾಲ ಸೌಲಭ್ಯ ನೀಡಿ

Pinterest LinkedIn Tumblr


ಬೆಂಗಳೂರು: ಮಳೆ ಹಾಗೂ ಪ್ರವಾಹದಿಂದ ಕಂಗೆಟ್ಟಿರುವ ಕರ್ನಾಟಕದ ರೈತರ ಬಳಿಗೆ ಬ್ಯಾಂಕ್‌ಗಳು ಹೋಗಿ ಸಾಲ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಿರ್ದೇಶನ ನೀಡಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ದೇವನಹಳ್ಳಿ ಸಮೀಪ ಸ್ವಸಹಾಯ ಗುಂಪುಗಳ ಚಳುವಳಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಕೃಷಿಕರ ಬಳಿಗೆ ಬ್ಯಾಂಕ್‌ಗಳೇ ಹೋಗಿ ಕೃಷಿಗೆ ಬೇಕಾದ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಹೇಳಿದರು.

ಸತತ ಬರ ಎದುರಿಸುತ್ತಿದ್ದ ಕರ್ನಾಟಕದಲ್ಲಿ ಇದೀಗ ನೆರೆ ಬಂದಿದೆ. ನೆರೆ ಆಗಮಿಸುವ ಮುನ್ಸೂಚನೆ ಇಲ್ಲದ ಪ್ರದೇಶಗಳೂ ಮುಳುಗಡೆಯಾಗಿವೆ. ಇದೀಗ ಕರಾವಳಿಯಲ್ಲೂ ಇದೇ ಸಮಸ್ಯೆಯಿದೆ. ನೆರೆಯಿಂದ ತೊಂದರೆಯಾಗಿದ್ದರೂ ಅಂತರ್ಜಲ ಮರುಪೂರಣವಾಗಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುತ್ತದೆ. ಇದರಿಂದ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ರೈತರಿಗೆ ಬ್ಯಾಂಕುಗಳು ಸಹಾಯ ಮಾಡಬೇಕು ಎಂದರು.

ವೀರೇಂದ್ರ ಹೆಗ್ಗಡೆ ಮಾದರಿ: ಸ್ವಸಹಾಯ ಸಂಸ್ಥೆಗಳನ್ನು ನಡೆಸುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರದ್ದೇ ವಿಶಿಷ್ಠ ಮಾದರಿ. ಹೆಗ್ಗಡೆಯವರಂತಹ ಸಾಮಾಜಿಕ, ಆಧ್ಯಾತ್ಮಿಕ ನಾಯಕರ ನೇತೃತ್ವ ವಹಿಸಿರುವ ಸಂಸ್ಥೆಗಳಿಗೆ ಬ್ಯಾಂಕ್‌ಗಳು ಸಾಲ ನೀಡಿದರೆ ಸೂಕ್ತ ಉದ್ದೇಶಕ್ಕೆ ಬಳಕೆಯಾಗುತ್ತದೆ. ಸಕಾಲಕ್ಕೆ ಮರುಪಾವತಿಯೂ ಆಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಆಲೋಚಿಸಬೇಕು. ಸಾಮಾಜಿಕ ಹಾಗೂ ಆಧ್ಯಾತ್ಮಿಕ ನೇತೃತ್ವವನ್ನು ಗುರುತಿಸಿ ಸಾಲ ನೀಡಬೇಕು ಎಂದರು.

ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನ: ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ಆಧ್ಯಾತ್ಮಿಕವಾಗಿ ಮಾತ್ರ ಖ್ಯಾತಿ ಪಡೆಯದೆ, ಆರೋಗ್ಯ, ಶಿಕ್ಷಣ, ಯೋಗ, ಆಯುರ್ವೇದ ಹಾಗೂ ನ್ಯಾಚುರೋಪತಿ ಸೇರಿ ಅನೇಕ ಸಾಮಾಜಿಕ ಕ್ಷೇತ್ರಗಳಲ್ಲೂ ಪ್ರಸಿದ್ಧಿ ಪಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಲಕ್ಷಾಂತರ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ಮೆಚ್ಚುಗೆ ಸೂಚಿಸಿದರು. ಇತ್ತೀಚೆಗೆ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರ ನೀಡಿದ ನೆರವನ್ನೂ ಸ್ಮರಿಸುತ್ತೇವೆ ಎಂದರು.

ಎಸ್‌ಕೆಡಿಆರ್‌ಡಿಪಿ ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ, ಎಲ್‌ಐಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಡಿ.ಸುಶೀಲ್‌ ಕುಮಾರ್‌, ಸಿಂಡಿಕೇಟ್‌ ಬ್ಯಾಂಕ್‌ ಎಂಡಿ ಮೃತ್ಯುಂಜಯ ಮಹಾಪಾತ್ರ, ಸಿಡ್ನಿ ಸಂಸ್ಥೆಯ ಅರೂಪ್‌ ಕುಮಾರ್‌, ಬ್ಯಾಂಕ್‌ ಆಫ್‌ ಬರೋಡಾ ಕಾರ್ಯ ನಿರ್ವಾಹಕ ನಿರ್ದೇಶಕ ಮುರಳಿ ರಾಮಸ್ವಾಮಿ, ಸೆಲ್ಕೊ ಸಂಸ್ಥೆಯ ಹರೀಶ್‌ ಹಂದೆ, ಸ್ವಸಹಾಯ ಸಂಘ ಚಳುವಳಿ ಹರಿಕಾರ ಅಲೋಷಿಯಸ್‌ ಫರ್ನಾಂಡೀಸ್‌ ಉಪಸ್ಥಿತರಿದ್ದರು.

ಬೆಳೆಯ ಮೌಲ್ಯವರ್ಧನೆ ಅತ್ಯಗತ್ಯ: ಬೆಳೆಗೆ ಸೂಕ್ತ ಬೆಲೆ ನೀಡುವಂತೆ ರೈತರು ಸರ್ಕಾರದಲ್ಲಿ ಬೇಡಿಕೆ ಇಡುವುದು ಸಾಮಾನ್ಯ. ಆದರೆ, ಬೆಳೆಯ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡುವ ಮೂಲಕ ಸಬಲರಾಗಲು ರೈತರು ಚಿಂತನೆ ನಡೆಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಹೆಗ್ಗಡೆ ಪೀಠದಲ್ಲಿ ಕುಳಿತು ವಿವಿಧ ಜಾತಿ, ಸಮುದಾಯ, ಪ್ರದೇಶಗಳ ನೂರಾರು ಜನರನ್ನು ನಿತ್ಯ ಭೇಟಿಯಾಗುತ್ತೇನೆ. ಜನಸೇವೆಯೇ ಅತ್ಯುತ್ತಮ ಸೇವೆ ಎಂಬ ಧ್ಯೇಯದಲ್ಲಿ ಧರ್ಮಸ್ಥಳ ಸಂಸ್ಥಾನ ಕಾರ್ಯ ನಿರ್ವಹಿಸುತ್ತಿದೆ. 40 ವರ್ಷದ ಹಿಂದೆ ಆರಂಭಿಸಿದ ಸಾಮಾಜಿಕ ಸೇವಾ ಚಟುವಟಿಕೆಗಳು ಸಮಾಜದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಸಮಸ್ಯೆಗಳಿಂದ ಉದ್ಭವವಾದ ಅವಕಾಶಗಳಿಂದ ಭಾರತ ಅಭಿವೃದ್ಧಿಯಾಗಿದೆಯೇ ವಿನ: ಹೊರಗಿನ ಹೂಡಿಕೆಗಳಿಂದಲ್ಲ. ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ರೈತರು ಉತ್ತಮ ಬೆಲೆ ಪಡೆಯಬೇಕು. ಆ ಮೂಲಕ ಸಬಲರಾಗಬೇಕು ಎಂದು ಕರೆ ನೀಡಿದರು.

ಶರೀರಕ್ಕೆ ಯಾವುದೇ ಖಾಯಿಲೆ ಬಂದಾಗ ಆಗುವ ನೋವನ್ನು ವರವೆಂದು ಭಾವಿಸಬೇಕು. ಆ ಸಣ್ಣ ನೋವಿನಿಂದಲೇ, ದೇಹದಲ್ಲಿ ಏನೋ ಸಮಸ್ಯೆ ಇದೆ ಎಂಬ ಅರಿವಾಗುತ್ತದೆ. ಸಣ್ಣ ನೋವನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಡ ಆಘಾತಕ್ಕೆ ಎಡೆ ಮಾಡುತ್ತದೆ. ಅದೇ ರೀತಿ ಬಡತನದಲ್ಲಿರುವವರ ಸಮಸ್ಯೆಗೆ ಕಿವಿಗೊಡಬೇಕು. ಆಗ ಸಮಾಜದ ನಿಜವಾದ ಸಮಸ್ಯೆ ಅರಿವಿಗೆ ಬರುತ್ತದೆ.
-ಡಾ.ಲ್ಯಾರಿ ರೀಡ್‌, ಷಿಕಾಗೊದ ರಿಸಲ್ಟ್ಸ್ ಶಿಕ್ಷಣ ನಿಧಿಯ ಹಿರಿಯ ಸಂಶೋಧಕ

27 ವರ್ಷದ ಹಿಂದೆ 500 ಸಂಖ್ಯೆಯಿಂದ ಆರಂಭವಾದ ಸ್ವಸಹಾಯ ಸಂಘಗಳ ಪರಂಪರೆ ಈಗ ಸುಮಾರು 10 ಲಕ್ಷಕ್ಕೆ ತಲುಪಿದೆ. ಸ್ವಸಹಾಯ ಸಂಘಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪರ್ಯಾಯ ಎಂಬಂತೆ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ.
-ಸೂರ್ಯ ಕುಮಾರ್‌, ನಬಾರ್ಡ್‌

Comments are closed.