ಕರ್ನಾಟಕ

ಹಾಸನ ವಿಮಾನ ನಿಲ್ದಾಣದ ದಶಕದ ಕನಸು ಮತ್ತೆ ಗರಿಗೆದರಿದೆ.

Pinterest LinkedIn Tumblr

ಹಾಸನ: ನಗರದ ಬೂವನಹಳ್ಳಿಗೆ ಭೇಟಿ ನೀಡಿ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿರುವ ಜಾಗವನ್ನು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಪರಿಶೀಲಿಸಿರುವುದರಿಂದ ದಶಕದ ಕನಸು ಮತ್ತೆ ಗರಿಗೆದರಿದೆ. ವಿಜಯ ಭಾಸ್ಕರ್ ಅವರು ವಿಮಾನ ನಿಲ್ದಾಣ ಯೋಜನೆ ಅನುಷ್ಠಾನದ ಸ್ಥಿತಿ, ಭೂಸ್ವಾಧೀನಕ್ಕೆ ಅಗತ್ಯವಿರುವ ಅನುದಾನದ ಬಗ್ಗೆ ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಆರ್.ಗಿರೀಶ್ ಯೋಜನೆಯ ವಿವರಗಳನ್ನು ನೀಡಿದರು.

ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನ ಮಾಡಿ ಶಂಕುಸ್ಥಾಪನೆ ನೇರವೇರಿಸಿದ್ದರೂ ಯೋಜನೆ ಹಲವು ವರ್ಷಗಳಿಂದ ಗಗನ ಕುಸುಮವಾಗಿಯೇ ಉಳಿದಿದೆ. ಜಿಲ್ಲೆಯ ರಾಜಕಾರಣಿಗಳು ಪ್ರಧಾನಿ, ಮುಖ್ಯಮಂತ್ರಿಯಂಥ ಪ್ರಭಾವಿ ಹುದ್ದೆಗಳಿಗೆ ಏರಿದ್ದರೂ ಯೋಜನೆ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ.

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಸನ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ಕೊಡಿಸಿದ್ದರು. ಆದರೆ ಅವರು ಮಾಜಿ ಆದ ನಂತರ ಯೋಜನೆ ನೆನೆಗುದಿಗೆ ಬಿತ್ತು. ನಂತರದಲ್ಲಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಯೊಂದಿಗೆ ಮುಖ್ಯ ಮಂತ್ರಿಯಾದಾಗ ದೇವೇಗೌಡರ ವಿಮಾನ ನಿಲ್ದಾಣದ ಕನಸಿಗೆ ರೆಕ್ಕೆಪುಕ್ಕ ಬಂತು. ಜ್ಯುಪಿಟರ್ ಏವಿಯೇಷನ್ ಮಾಲೀಕ ರಾಜೀವ್ ಚಂದ್ರಶೇಖರ್ ಅವರನ್ನು 2007ರ ಆ. 26ರಂದು ನಗರಕ್ಕೆ ಕರೆತಂದು 1200 ಕೋಟಿ ರೂ.ವೆಚ್ಚದ ವಿಮಾನ ನಿಲ್ದಾಣ ಯೋಜನೆ ಕಾಮಗಾರಿ ಬೂವ ನಹಳ್ಳಿ ಬಳಿ ಶಂಕುಸ್ಥಾಪನೆ ಮಾಡಿಸ ಲಾಯಿತು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ, ಜತೆಗೆ ವಿಮಾನ ದುರಸ್ತಿ ಹಾಗೂ ತರಬೇತಿ ಕೇಂದ್ರ, ಗಾಲ್ಫï ಆಟದ ಮೈದಾನ ಆರಂಭಿಸುವ ಹಾಗೂ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಗಳ ಮಹಾಪೂರವನ್ನೆ ಹರಿಸಿದ್ದರು. ಈ ಯೋಜನೆ ಈಡೇರಿದರೆ ಬೂವನಹಳ್ಳಿ ಸುತ್ತಲಿನ ರೈತರ ಜಮೀನು, ಕಟ್ಟಡಕ್ಕೆ ಬಂಗಾರದ ಬೆಲೆ ಬರುತ್ತೆ ಎನ್ನಲಾಗಿತ್ತು. ಆದರೆ ಶಂಕು ಸ್ಥಾಪನೆಗೊಂಡ ಸ್ಥಳದ ಸುತ್ತ ಬೇಲಿ ಹಾಕಿದ್ದು ಬಿಟ್ಟರೆ ಯಾವುದೇ ಪ್ರಗತಿ ಆಗಿರಲಿಲ್ಲ.

ನಿಲ್ದಾಣದ ಕಾಮಗಾರಿ ಇರಲಿ, ವಿದ್ಯುತ್ ಕಂಬ ಸ್ಥಳಾಂತರಿಸುವ ಗುತ್ತಿಗೆ ಪಡೆದ ಟ್ರಾನ್ಸ್‍ಗ್ಲೋಬಲ್ ಫೆರೆಕ್ಸ್ ಇಂಡಿಯಾ ಲಿ. 2008ರ ಮಾರ್ಚ್‍ಗೆ ಪೂರ್ಣಗೊಳಿಸುವ ಒಪ್ಪಂದ ಮಾಡಿಕೊಂಡಿದ್ದರೂ, ಈವರೆಗೆ ಪೂರ್ಣಗೊಳಿಸಿಲ್ಲ.

ಈ ಯೋಜನೆಗೆ ಒಟ್ಟು 982 ಎಕರೆ ಜಮೀನು ಅಗತ್ಯವಿದೆ. ಈಗಾಗಲೇ 536 ಎಕರೆ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿಗೆ ಹಣ ಪಾವತಿಸಲಾಗಿದೆ. ಸ್ವಾಧೀನಪಡಿಸಿಕೊಂಡ 536.24 ಎಕರೆ ಜಮೀನನ್ನು ಪಿಡಬ್ಲ್ಯುಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸಂಪರ್ಕ ರಸ್ತೆ ಮತ್ತಿತರ ಉದ್ದೇಶಕ್ಕೆ 144.28 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಗುತ್ತಿಗೆ ಕಂಪನಿಗೆ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಈ ಎಲ್ಲ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅವರ ಭೇಟಿ, ಪರಿಶೀಲನೆ ಇನ್ನೂ ವಿಮಾನ ನಿಲ್ದಾಣ ಯೋಜನೆ ಜೀವಂತವಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ. ಸಿಎಸ್ ಭೇಟಿ ವೇಳೆ ಜಿಪಂ ಸಿಇಒ ಪರಮೇಶ್, ಸಿಪಿಒ ನಾಗರಾಜ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿ ಡಾ.ನವಿನ್ ಭಟ್, ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಡಾ.ನಾಗರಾಜ್, ತಹಸೀಲ್ದಾರ್ ಮೇಘನಾ, ಕೆಗಾರಿಕಾ ಅಭಿವೃದ್ಧಿ ನಿಗಮದ ವಿಶೇಷ ಭೂ ಸ್ವಾಧೀನಾಧಿಕಾರಿ ಸುರೇಶ ಮತ್ತಿತರರು ಇದ್ದರು.

Comments are closed.