ಕರ್ನಾಟಕ

ಯಾವ ವಿಷಯದಲ್ಲೂ ಹಿಂದೆ ಸರಿಯುವುದಿಲ್ಲ, ಎಲ್ಲ ಪ್ರಶ್ನೆಗೂ ಉತ್ತರ ಕೊಡುತ್ತೇನೆ; ಡಿ.ಕೆ.ಶಿ

Pinterest LinkedIn Tumblr


ಬೆಂಗಳೂರು:ನಾನು ಏಳು ಬಾರಿ ಶಾಸಕನಾದವನು. ಇ.ಡಿ.ಯವರು ನೀಡಿದ ಸಮನ್ಸ್​ಗೆ ಉತ್ತರ ನೀಡಬೇಕಾದದ್ದು ನನ್ನ ಜವಾಬ್ದಾರಿ. ಹೀಗಾಗಿ ನಾನು ದೆಹಲಿಗೆ ಹೋಗಿ ಉತ್ತರ ನೀಡಿದೆ. ಕಾನೂನಿನ ಮೇಲೆ ನಂಬಿಕೆ ಇಟ್ಟು ಹೋದೆ ಎಂದು ಡಿಕೆಶಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಈ ಕಚೇರಿ ನಮ್ಮ ಪಾಲಿನ ದೇವಾಲಯಕಾಂಗ್ರೆಸ್ ಕಚೇರಿ ನನಗೆ ದೇವಾಲಯ ಇದ್ದಂತೆ. ಇದು ವಿಶೇಷವಾದ ಸಂದರ್ಭ. ಈ ದೇವಾಲಯದಲ್ಲಿ ಭಕ್ತನಿಗೂ ಭಗವಂತನಿಗೂ ನಡುವೆ ನಡೆಯುವ ವ್ಯವಹಾರ. ಮೊದಲು ನಾನು ಮಾಧ್ಯಮಗಳಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಪರ ಅಥವಾ ವಿರೋಧ ಏನು ಮಾತಾಡಿದ್ರೂ ನಾನು ತಲೆ ಕೆಡಿಸಿಕೊಂಡಿಲ್ಲ. ಬಂಡೆ ಚೂರ್ ಚೂರ್ ಆಗಿದೆ ಅಂದಿರ್ಬಹುದು. ಅದು ಪ್ರಕೃತಿ. ಅದನ್ನು ಕೆತ್ತಿದಾಗ ಮೂರ್ತಿಯಾಗಬಹುದು. ಪೂಜಿಸಿದಾಗ ಸಂಸ್ಕೃತಿಯಾಗಬಹುದು ಎಂದು ಹೇಳಿದರು.

ನನಗ್ಯಾಕೆ ಈ ಸ್ಥಿತಿ ಬಂತು ಎನ್ನುವ ಬಗ್ಗೆ ನಾನು ಆಲೋಚಿಸಿದ್ದೇನೆ. ನನ್ನ ಜೊತೆ ಅಭಿಮಾನಿಗಳು, ಕಾರ್ಯಕರ್ತರು, ಬಿಜೆಪಿಯ ಗೆಳೆಯರೂ ಸೇರಿದಂತೆ ಎಲ್ರೂ ತೋರಿಸಿದ ಪ್ರೀತಿಯನ್ನು ಯಾರೂ ಅಳೆಯಲು ಸಾಧ್ಯವಿಲ್ಲ. ನಾನೇನಾದ್ರೂ ತಪ್ಪು ಮಾಡಿದರೆ, ಚುನಾವಣೆ ಅಫಿಡವಿಟ್​ನಲ್ಲಿ ತಿಳಿಸಿದ್ದೇನೆ. ನನ್ನ ತಮ್ಮನ ಅಫಿಡವಿಟ್, ಪತ್ನಿ ಅಫಿಡವಿಟ್ ಫೈಲ್ ಮಾಡಿದ್ದೇನೆ. ಮಗಳ ಅಫಿಡವಿಟ್ ಫೈಲ್ ಮಾಡ್ಬೇಕು ಅನ್ನೊ ನಿಯಮವಿಲ್ಲ. ಆದರೂ ನಾನು ಸಲ್ಲಿಸಿದ್ದೇನೆ ಎಂದರು.

ನಾನು ಯಾವುದರ ಬಗ್ಗೆಯೂ ಈಗ ಮಾತಾಡಲ್ಲ. ಮುಂದಿನ‌ ದಿನಗಳಲ್ಲಿ ದಾಖಲೆ ಸಮೇತ ಈ ಬಗ್ಗೆ ಮಾತಾಡ್ತೀನಿ. ಜಾರ್ಜ್ ನನ್ನ ಪಾಲಿನ ಭಾಗ್ಯ. ಚಿಕ್ಕ ವಯಸ್ಸಿಂದ ನನ್ನನ್ನು ಬೆಳೆಸಿದ್ದಾರೆ. ನಾನು ಯಾರಿಗೂ ದ್ರೋಹ ಮಾಡೋಕೆ ಹೋಗಿಲ್ಲ. ರಾಜಕೀಯವಾಗಿ ಕೆಲವರನ್ನು ಅಧಿಕಾರದಿಂದ ದೂರ ಇಟ್ಟಿರಬಹುದು. ಅದು ಸಹಜ. ನನ್ನ ಕೆಲಸವನ್ನು ನಾನು ಮಾಡಿಕೊಂಡು ಬಂದಿದ್ದೇನೆ.

ಪಕ್ಷ, ನಾಯಕರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ. ನೀಡಿದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ಹಾಗೇ ನಡೆದುಕೊಂಡಿದ್ದೇನೆ. ಕಳೆದ ಬಾರಿ ಶಾಸಕರ ಬಗ್ಗೆ ಕರೆ ಬಂದಾಗ ನಾನು ಸಿಂಗಾಪುರದಲ್ಲಿದ್ದೆ. ಮುಂಬೈನಲ್ಲಿ ವಿಲಾಸರಾವ್ ದೇಶಮುಖ್ ಸರ್ಕಾರದ ವೇಳೆ ನಡುರಾತ್ರಿ ಬಂದ ಶಾಸಕರನ್ನ ನಾನು ಕಾಪಾಡಿದ್ದೇನೆ. ಪಕ್ಷ ಕೊಟ್ಟ ಕೆಲಸವನ್ನು ಮಾಡುತ್ತಲೇ ಬಂದಿದ್ದೇನೆ. ನಾನು ಹಳ್ಳಿಯಿಂದ ಬಂದವನು. ಆಗಸ್ಟ್ 5ರಂದು ಐಟಿ ಕಚೇರಿಯಿ‌ಂದ ಹೊರಬಂದಾಗ ಮಾತನಾಡಿದ್ದನ್ನು ಈಗಲೂ ಅದನ್ನೇ ಹೇಳುತ್ತೇನೆ. ನಾನೊಬ್ಬನೇ ಕಾರ್ಯಕರ್ತನಲ್ಲ. ಕಾರ್ಯಕರ್ತರ ಸೈನ್ಯವೇ ಇಲ್ಲಿದೆ. ಇವತ್ತು ಕಂಡ ಪ್ರೀತಿ, ಹಣ ಕೊಟ್ಟು ಇವ್ರನ್ನೆಲ್ಲಾ ಕರೆ ತರೋಕೆ ಸಾಧ್ಯವಿಲ್ಲ. ನಾನೇನು ಎಲ್ರಿಗೂ ಸಹಾಯ ಮಾಡಕ್ಕೆ ಸಾಧ್ಯವಾಗಿಲ್ಲ. ಅವರು ತೋರಿಸಿದ ಪ್ರೀತಿ ಅಭಿಮಾನದ ಋಣ ತೀರಿಸುವ ಶಕ್ತಿ ಕೊಡು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಅವರು ಬಂದು 40 ನಿಮಿಷ ಮಾತನಾಡಿ ಹೋದರು. ಜೈಲಿನ ನಿಯಮದಂತೆ ತಿಂಗಳಿಗೆ ಒಂದೇ ಭೇಟಿ ಒಬ್ಬರಿಗೆ. ಹಾಗಾಗಿ ಅನೇಕರು ಬರುವುದಲ್ಲೆ ಆಗಲ್ಲ. ನನ್ನ ಹೆಂಡತಿ, ಮಕ್ಕಳು, ದೇವೇಗೌಡ್ರು ಎಲ್ರೂ ಬರ್ತೀನಿ ಅಂದ್ರು. ನಾನೇ ಬೇಡ ಅಂದೆ. ನಾವು ಪರ್ಮಿಟ್ ಮಾಡಿದ್ರೆ ಮಾತ್ರ ಜೈಲಲ್ಲಿ ಬಿಡ್ತಾರೆ. ಆಸ್ಪತ್ರೆಯಲ್ಲಿ ಇದ್ದಾಗ ಸಿದ್ದರಾಮಯ್ಯ ಅವರನ್ನು ಭೇಟಿಗೆ ಬಿಡಲಿಲ್ಲ. ಬಹಳ ಉಪಾಯ ಮಾಡಿ, ದಿನೇಶ್ ಗುಂಡೂರಾವ್ ಅವರನ್ನು ಕರೆಸಿಕೊಂಡೆ. ಪರಮೇಶ್ವರ್ ಅವರಿಗೆ ಸೂಟ್ ಹಾಕಿಸಿ, ಸ್ಟೆಥಸ್ಕೋಪ್ ಕೊಟ್ಟು, ಡಾಕ್ಟರ್ ಅಂತ ಹೇಳಿ ಬಂದು ಭೇಟಿಯಾದ್ರು ಎಂದು ಅನುಭವ ಹಂಚಿಕೊಂಡರು.

ಇಲ್ಲಿ ಜಾತಿ ವಿಚಾರ ಇಲ್ಲ. ಇದು ಅಭಿಮಾನ, ಪ್ರೀತಿ. ಅವ್ರ ನಂಬಿಕೆಗೆ ಶಿವಕುಮಾರ್ ಏನೂ ಮೋಸ ಮಾಡಿಲ್ಲ. ನಾನು ಮೋಸ ಮಾಡಿದ್ರೆ, ಕಾನೂನು ಮೀರಿದ್ರೆ ದೇವ್ರು ನನ್ನನ್ನು ಶಿಕ್ಷಿಸಲಿ. ಇಡಿ ನನ್ನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬೇಲ್ ಕ್ಯಾನ್ಸಲ್ ಮಾಡುವಂತೆ ಮನವಿ ಮಾಡಿದೆ. ನಾನು ಜೈಲಿನಲ್ಲಿ ಕಾಯ್ದೆಯ ಪ್ರತಿ ಪದವನ್ನೂ ಓದಿದ್ದೇನೆ. ಎಲ್ಲವೂ ನನ್ನ ತಲೆಯಲ್ಲಿದೆ. ನ್ಯಾಯಾಲಯದ ಪೀಠದಿಂದ ಅನ್ಯಾಯದ ತೀರ್ಪು ಬರಬಾರದು. ನನ್ನೊಬ್ಬನ ಪ್ರಕರಣ ಇಡಿ ದೇಶದ ಅತಿ ದೊಡ್ಡ ಪ್ರಕರಣ ಆಗಬಹುದು. ಇದೊಂದು ದೊಡ್ಡ ಉದಾಹರಣೆ ಕೂಡಾ ಆಗಲಿದೆ. ನೂರಾರು ಅಕೌಂಟ್ ಇದೆ ಅಂದಿದ್ದಾರೆ, ಮಗಳ ಆಸ್ತಿ ಎಲ್ಲಾ ವಿಚಾರಕ್ಕೂ ನಾನು ಉತ್ತರಿಸ್ತೇನೆ. ಹಿಂದೆ ಸರಿಯುವ ಮಾತೇ ಇಲ್ಲ. ನನಗೆ ಸಮಯ ಮತ್ತು ಕಾನೂನಿನ ಮೇಲೆ ನಂಬಿಕೆಯಿದೆ ಎಂದರು.

Comments are closed.