ಕರ್ನಾಟಕ

ಕೃಷಿ ಮಾಡಲೆಂದೇ ಕ್ಯಾಲಿಫೋರ್ನಿಯಾದಿಂದ ರಾಜ್ಯಕ್ಕೆ ಬಂದು ಯಶಸ್ವಿಯಾದ ಸಾಫ್ಟ್ ವೇರ್ ಎಂಜಿನೀಯರ್!

Pinterest LinkedIn Tumblr


ಬೆಂಗಳೂರು: ಸಾಮಾನ್ಯವಾಗಿ ಯುವಕರು ಕೈತುಂಬಾ ಸಂಬಳ ಮತ್ತು ಪ್ರತಿಷ್ಠೆಗಾಗಿ ವಿದೇಶಕ್ಕೆ ಹಾರುತ್ತಾರೆ. ಆದರೆ, ಇಲ್ಲೊಬ್ಬರು ಬೇಸಾಯ ಮಾಡಲಿಕ್ಕಾಗಿಯೇ ವಿದೇಶದಿಂದ ಹಳ್ಳಿಗೆ ಹಾರಿಬಂದಿದ್ದಾರೆ. ಒಂದೆಡೆ ಕೃಷಿಯಲ್ಲಿ ಕೈಸುಟ್ಟುಕೊಂಡ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಹಳ್ಳಿಗಳಿಂದ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ತುಸು ಚೆನ್ನಾಗಿ ಕಲಿತವರು ವಿದೇಶದಲ್ಲಿ “ಸೆಟಲ್‌’ ಆಗುತ್ತಿದ್ದಾರೆ.

ಹೀಗಿರುವಾಗ, ಸುರೇಶ್‌ ದೇವಾಂಗ ಎಂಬುವರು ಅಮೆರಿಕದ ಕ್ಯಾಲಿಫೋರ್ನಿಯದಿಂದ ಮೈಸೂರಿನ ಎಚ್‌.ಡಿ. ಕೋಟೆ ತಾಲೂಕಿನ ಪುರ ಗ್ರಾಮಕ್ಕೆ ಬಂದು ಕೃಷಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮೂರ್‍ನಾಲ್ಕು ಕುಟುಂಬಗಳಿಗೆ ಉದ್ಯೋಗ ನೀಡಿದ್ದು, ಪ್ರತಿ ವರ್ಷ ಲಕ್ಷಾಂತರ ರೂ. ಎಣಿಸುತ್ತಿದ್ದಾರೆ. ಈ ಮೂಲಕ ಅವರು ಸುತ್ತಲಿನ ಯುವಕರಿಗೆ ಮಾದರಿ ಆಗುವುದರ ಜತೆಗೆ ವಿದೇಶಿಗರೇ ತಮ್ಮ ಜಮೀನಿಗೆ ಬಂದು ಕೃಷಿಯನ್ನು ಅನುಸರಿಸುವಂತೆ ಪ್ರೇರಣೆಯಾಗಿದ್ದಾರೆ.

ಸುರೇಶ್‌ ಓದಿದ್ದು ಸಾಫ್ಟ್ವೇರ್‌ ಎಂಜಿನಿಯರಿಂಗ್‌. ಕೆಲಸ ಬೆಂಗಳೂರು, ಜರ್ಮನಿ, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ. ಸುಮಾರು 20 ವರ್ಷದ ಸೇವೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಪ್ರತಿ ತಿಂಗಳು 3 ಲಕ್ಷ ರೂ. ಸಂಬಳ ಎಣಿಸುತ್ತಿದ್ದರು. ಪತ್ನಿ ಕೂಡ ಸಾಫ್ಟ್ವೇರ್‌ ಎಂಜಿನಿಯರ್‌. ಆದರೂ ಅಲ್ಲಿ ತೃಪ್ತಿ ಇರಲಿಲ್ಲ. ಎಲ್ಲವನ್ನೂ ಆಗ ಹಣದಿಂದಲೇ ಅಳೆಯಲಾಗುತ್ತಿತ್ತು. ಈ ಕೊರಗು ಯಾವಾಗಲೂ ಕಾಡುತ್ತಿತ್ತು.

ಒಂದು ದಿನ ನಿರ್ಧಾರ ಮಾಡಿ, ಭಾರತದ ವಿಮಾನ ಏರಿದರು. ತಮಗೆ ಅಪರಿಚಿತವಾಗಿದ್ದ ಮೈಸೂರಿನ ಪುರದಲ್ಲಿ ಸುಮಾರು 6 ಎಕರೆ ಜಮೀನು ಖರೀದಿಸಿ, ಕೃಷಿಗೆ ಟೊಂಕಕಟ್ಟಿ ನಿಂತರು. ಕೇವಲ ಮೂರು ವರ್ಷದಲ್ಲಿ ಜಿಲ್ಲೆಗೇ ಅತ್ಯುತ್ತಮ ರೈತನಾಗಿ ಹೊರಹೊಮ್ಮಿದರು. “ಒಂಭತ್ತು ವರ್ಷ ಬೆಂಗಳೂರು, ಒಂದು ವರ್ಷ ಜರ್ಮನಿ, 11 ವರ್ಷ ನಾನು ಕ್ಯಾಲಿಫೋರ್ನಿಯದಲ್ಲಿ ಕಂಪೆನಿಯೊಂದರಲ್ಲಿ ಐಟಿ ಆರ್ಕಿಟೆಕ್ಟ್ ಆಗಿದ್ದೆ.

ಉನ್ನತ ಹುದ್ದೆಯಾಗಿದ್ದರೂ, ಸಾಧನೆ ಮಾಡಿದ ತೃಪ್ತಿ ಇರಲಿಲ್ಲ. ಯಾರೂ ನನ್ನನ್ನು ಗುರುತಿಸುತ್ತಿರಲಿಲ್ಲ. ಈಗ ಕೇವಲ ಮೂರು ವರ್ಷಗಳಲ್ಲಿ ನಾನು ಚಿರಪರಿಚಿತ. ಅದೇ ಕ್ಯಾಲಿಫೋರ್ನಿಯ, ಭೂತಾನ್‌ನಿಂದ ಬಂದು ನನ್ನ ಜಮೀನಿಗೆ ಭೇಟಿ ನೀಡಿದವರೂ ಇದ್ದಾರೆ. ಇದು ಸಾಧ್ಯವಾಗಿದ್ದು ಕೃಷಿಯಿಂದ’ ಎಂದು ಸುರೇಶ್‌ “ಉದಯವಾಣಿ’ಗೆ ತಿಳಿಸಿದರು.

ಎಂಟು ಲಕ್ಷ ಆದಾಯ; ಐದು ವರ್ಷದಲ್ಲಿ ದುಪ್ಪಟ್ಟು: “6 ಎಕರೆ ಸ್ವಂತ ಜಮೀನು (ಇದರ ಹೆಸರು ಹೊಸ ಚಿಗುರು), 11.5 ಎಕರೆ ಲೀಸ್‌ನಲ್ಲಿ ತೆಗೆದುಕೊಂಡಿದ್ದೇನೆ. ದೀರ್ಘಾವಧಿಯಿಂದ ಹಿಡಿದು ಅಲ್ಪಾವಧಿವರೆಗೂ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ತೆಂಗು, ಮಾವು, ನಿಂಬೆ, ಪಶುಸಂಗೋಪನೆ, ಕುರಿ, ಕೋಳಿ, ಮೊಲ, ಪಾರಿವಾಳ, ಜೇನು ಸಾಕಾಣಿಕೆ ಸೇರಿ ಸಮಗ್ರ ಕೃಷಿ ಅನುಸರಿಸುತ್ತಿದ್ದು, ಸುಮಾರು 78 ಪ್ರಕಾರದ ಸಿರಿಧಾನ್ಯಗಳನ್ನೂ ಬೆಳೆದಿದ್ದೇನೆ.

ಪ್ರಸ್ತುತ ವಾರ್ಷಿಕ 10ರಿಂದ 12 ಲಕ್ಷ ವಹಿವಾಟು ನಡೆಸುತ್ತಿದ್ದು, ಎಲ್ಲ ಖರ್ಚು ತೆಗೆದು, 8 ಲಕ್ಷ ನಿವ್ವಳ ಲಾಭ ಗಳಿಸುತ್ತಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ಈ ಆದಾಯ ದುಪ್ಪಟ್ಟುಗೊಳಿಸುವ ಗುರಿ ಇದ್ದು, ಜತೆಗೆ ಬೆಳೆದ ಉತ್ಪನ್ನಗಳನ್ನು ಸ್ವಂತ ಬ್ರ್ಯಾಂಡ್‌ ಮಾಡಿ ಮಾರಾಟ ಮಾಡುವ ಉದ್ದೇಶ ಇದೆ’ ಎಂದು ಸುರೇಶ್‌ ದೇವಾಂಗ ವಿವರಿಸಿದರು. ತಂತ್ರಜ್ಞಾನಗಳ ಅಳವಡಿಕೆ, ನಿರಂತರ ಆದಾಯ ತಂದುಕೊಡುವ ಬೆಳೆಗಳನ್ನು ಬೆಳೆಯುವುದು ಲಾಭದ ಗುಟ್ಟು. ನಿತ್ಯ ಶಾಲಾ ಮಕ್ಕಳು ಫಾರಂಗೆ ಭೇಟಿ ನೀಡುತ್ತಾರೆ.

ಅವರಿಗೆ ಅಲ್ಲಿ ಆಟವಾಡಲು ಆ ಮೂಲಕ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡಲಾಗುತ್ತಿದೆ. ಪತ್ನಿ ಕೂಡ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದು, ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅಂದಹಾಗೆ, ಸುರೇಶ್‌ ಅವರ ಈ ಸಾಧನೆಗೆ ಬೆಂಗಳೂರು ಕೃಷಿ ಮೇಳದಲ್ಲಿ ಪ್ರಗತಿಪರ ರೈತ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಮೈಸೂರು ಜಿಲ್ಲೆಯ ಸೊಳ್ಳೆಪುರ ಹಾಡಿಯ ದಾಸಿ ಹಾಗೂ ಚಾಮರಾಜನಗರದ ಸುಧಾ ಅವರಿಗೆ “ಪ್ರಗತಿಪರ ರೈತ ಮಹಿಳೆ’ ಮತ್ತು ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದ ಮಹದೇವಶೆಟ್ಟಿ ಅವರಿಗೆ “ಪ್ರಗತಿಪರ ರೈತ’ ಮತ್ತು ಈ ಎರಡೂ ಜಿಲ್ಲೆಗಳ ತಾಲೂಕುಮಟ್ಟದ ಯುವ ರೈತ ಮತ್ತು ರೈತ ಮಹಿಳೆಯರಿಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Comments are closed.