ಕರ್ನಾಟಕ

ನಕಲಿ ದಾಖಲೆ ಸಲ್ಲಿಸಿ ಆಸ್ತಿ ಮಾರಾಟ ಮಾಡುವುದಕ್ಕೆ ಬ್ರೇಕ್‌’ ಹಾಕಲು ಆಸ್ತಿ ನೋಂದಣಿಗೆ ಒಟಿಪಿ

Pinterest LinkedIn Tumblr


ಬೆಂಗಳೂರು: ಓರ್ವರ ಆಸ್ತಿಯನ್ನು ಅವರಿಗೆ ಗೊತ್ತಿಲ್ಲದಂತೆ ಅಕ್ರಮವಾಗಿ ಮತ್ತೋರ್ವರಿಗೆ ಮಾರಾಟ ಮಾಡಿ ವಂಚಿಸುವುದಕ್ಕೆ ಕಡಿವಾಣ ಹಾಕಲು “ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ)’ ಮೂಲಕ ಆಸ್ತಿ ಮಾರಾಟಗಾರರು ಹಾಗೂ ಖರೀದಿದಾರರಿಂದ ಖಾತರಿ ಪಡಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಸಿದ್ಧತೆ ನಡೆಸಿದೆ.

ನಕಲಿ ದಾಖಲೆಗಳನ್ನು ಸಲ್ಲಿಸಿ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ “ಬ್ರೇಕ್‌’ ಹಾಕಲು ಆಸ್ತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ವೆಬ್‌ಸೈಟ್‌ನಲ್ಲಿ
ಅಪ್‌ಲೋಡ್‌ ಮಾಡಿದ ಬಳಿಕವಷ್ಟೇ ಆಸ್ತಿ ನೋಂದಣಿ ಯಾಗುವ ವ್ಯವಸ್ಥೆಯನ್ನು ಕಡ್ಡಾಯಗೊಳಿ ಸಲು ಸಜ್ಜಾಗಿದ್ದು , ಆ ಮೂಲಕ ದಾಖಲೆಗಳ ದೃಢೀಕರಣಕ್ಕೆ ಒತ್ತು ನೀಡಲು ಮುಂದಾಗಿದೆ.

ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಿಂದ ನಗರ, ಪಟ್ಟಣ ಪ್ರದೇಶಗಳತ್ತ ಜನ ವಲಸೆ ಹೋಗುವುದು ನಡೆಯುತ್ತಲೇ ಇದೆ. ಅದರಂತೆ ನಗರ, ಪಟ್ಟಣಗಳ ಜನಸಂಖ್ಯೆ ಹಾಗೂ ಗಾತ್ರವೂ ಹಿಗ್ಗುತ್ತಿದೆ. ಆ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಭರಾಟೆಯೂ ಜೋರಾಗಿದ್ದು, ಸರಕಾರಕ್ಕೂ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. ರಾಜ್ಯಾದ್ಯಂತ ನಿತ್ಯ 10,000ಕ್ಕೂ ಹೆಚ್ಚು ಆಸ್ತಿ ನೋಂದಣಿಯಾಗುತ್ತಿದೆ. ಜತೆಗೆ ನಾನಾ ರೀತಿಯ ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆ ಕಡಿ ವಾಣ ಹಾಕಲು ಇಲಾಖೆ ಒಂದಿಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಒಟಿಪಿ ಖಾತರಿ
ಅಕ್ರಮವಾಗಿ ಆಸ್ತಿ ಮಾರಾಟಕ್ಕೆ ಕಡಿವಾಣ ಹಾಕಲು ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಖಾತರಿ ವ್ಯವಸ್ಥೆ ತರಲು ಚಿಂತಿಸಿದೆ. ಈ ವ್ಯವಸ್ಥೆಯಲ್ಲಿ ಮಾರಾಟಗಾರರು ಹಾಗೂ ಖರೀದಿದಾರರಿಗೆ ಆಸ್ತಿ ನೋಂದಣಿ ಪ್ರಕ್ರಿಯೆ ಸಂದರ್ಭದಲ್ಲಿ “ಒಟಿಪಿ’ ಸಂದೇಶ ರವಾನೆಯಾಗುತ್ತದೆ. ಆ ಒಟಿಪಿ ಸಂಖ್ಯೆಯನ್ನು ಉಪ ನೋಂದಣಾಧಿಕಾರಿಗಳ ಮೂಲಕ ನಮೂದಿಸಿದರಷ್ಟೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ಅನಧಿಕೃತ ವ್ಯಕ್ತಿಗಳು ಅಕ್ರಮವಾಗಿ ಯಾರಧ್ದೋ ಆಸ್ತಿ ಮಾರಾಟ ಮಾಡುವು ದನ್ನು ತಪ್ಪಿಸಬಹುದು ಎಂಬುದು ಇಲಾಖೆಯ ವಿಶ್ವಾಸ.

ಶಿವಮೊಗ್ಗದಲ್ಲಿ ಪ್ರಾಯೋಗಿಕ ಜಾರಿ
ಆಸ್ತಿ ಮಾರಾಟಗಾರರು, ಖರೀದಿದಾರರಿಂದ ಒಟಿಪಿ ಖಾತ‌ರಿ ಹಾಗೂ ಆಸ್ತಿ ದಾಖಲೆಗಳ ಸ್ಕ್ಯಾನಿಂಗ್‌ ವ್ಯವಸ್ಥೆ ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಮೂರು ದಿನಗಳಿಂದ ಜಾರಿಯಾಗಿದೆ. ಈ ವ್ಯವಸ್ಥೆಯ ಸಾಧಕ- ಬಾಧಕ ಪರಿಶೀಲಿಸಿ ಪರಿಣಾಮಕಾರಿ ಎಂದು ಕಂಡುಬಂದರೆ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ಚಿಂತಿಸಿದೆ.

ದಾಖಲೆಗಳ ಸ್ಕ್ಯಾನಿಂಗ್‌
ಸದ್ಯ ಆಸ್ತಿ ನೋಂದಣಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಉಪ ನೋಂದಣಾಧಿಕಾರಿ ಹಂತದಲ್ಲಿ ಪರಿಶೀಲನೆ ನಡೆಸಿ ಬಳಿಕ ನೋಂದಣಿ ಮಾಡುವ ವ್ಯವಸ್ಥೆ ಇದೆ. ಆದರೆ ನಕಲಿ ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಆಸ್ತಿ ಪರಭಾರೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ನೋಂದಣಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧಪಟ್ಟಂತೆ ಹಕ್ಕುಪತ್ರ, ಆಸ್ತಿ ತೆರಿಗೆ ಪಾವತಿ ರಸೀದಿ ಸಹಿತ ದಾಖಲೆಗಳನ್ನು ಉಪ ನೋಂದ ಣಾಧಿಕಾರಿ ಹಂತದಲ್ಲೇ ಪರಿಶೀಲಿಸಿ ಅವುಗಳ ಸಾಚಾತನ ಖಾತರಿಪಡಿಸಿಕೊಂಡು ಸ್ಕ್ಯಾನಿಂಗ್‌ ಮಾಡಿ ಅಪ್‌ಲೋಡ್‌ ಮಾಡಲಾಗುತ್ತದೆ. ಅನಂತರ ವಷ್ಟೇ ಆಸ್ತಿ ನೋಂದಣಿಯಾಗಲಿದ್ದು, ದಾಖಲೆ ಗಳಿಗೆ ಸಂಬಂಧಪಟ್ಟಂತೆ ಅಕ್ರಮಗಳಿಗೆ ಅವಕಾಶ ವಿಲ್ಲದಂತಾಗ ಲಿದೆ ಎಂಬುದು ಇಲಾಖೆ ನಿರೀಕ್ಷೆ.

ಆಸ್ತಿ ಮಾರಾಟ, ನೋಂದಣಿ ಪ್ರಕ್ರಿಯೆಯಲ್ಲಿನ ಅಕ್ರಮ ತಡೆಗೆ ಒಟಿಪಿ ಖಾತರಿ ಹಾಗೂ ದಾಖಲೆಗಳನ್ನು ಸ್ಕ್ಯಾನಿಂಗ್‌ ಮಾಡಿ ದಾಖಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.
– ಡಾ| ಕೆ.ವಿ. ತ್ರಿಲೋಕ್‌ಚಂದ್ರ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮಹಾನಿರೀಕ್ಷಕ

Comments are closed.