ಕರ್ನಾಟಕ

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಅ.25ರವರೆಗೂ ಇದೇ ರೀತಿ ಭಾರಿ ಮಳೆ

Pinterest LinkedIn Tumblr


ಬೆಂಗಳೂರು: ರಾಜ್ಯದಾದ್ಯಂತ ಮಳೆಯ ಅಬ್ಬರ ಜೋರಾದಂತೆ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ.

ಸೋಮವಾರ ಭಾರಿ ಮಳೆ ಸುರಿದಿದ್ದು, ಅ.25ರವರೆಗೂ ಇದೇ ರೀತಿ ಭಾರಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯು ಬೆಂಗಳೂರಿಗೆ ಯೆಲ್ಲೊ ಅಲರ್ಟ್‌ ಘೋಷಿಸಿದೆ.

ವಾಯುಭಾರ ಕುಸಿತದಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಶುರುವಾಗಿತ್ತು. ಸಂಜೆ ಬಳಿಕ ವರುಣನ ಆರ್ಭಟ ಜೋರಾಯಿತು. ಪರಿಣಾಮ, ಮಾಗಡಿ ರಸ್ತೆಯ ಒಂದನೇ ಕ್ರಾಸ್‌ನಲ್ಲಿರುವ ಪಾಲಿಕೆಯ ವಸತಿ ಸಮುಚ್ಚಯದ ಕಾಂಪೌಂಡ್‌ ಕುಸಿದಿದ್ದರಿಂದ ರಂಗಸ್ವಾಮಿ ಎಂಬುವರ ಮನೆಗೆ ನೀರು ನುಗ್ಗಿತ್ತು. ಇದರಿಂದ ಮನೆಯವರು ರಾತ್ರಿ ಇಡೀ ಜಾಗರಣೆ ಮಾಡಬೇಕಾಯಿತು.

ಮಳೆಯ ಅಬ್ಬರದಿಂದಾಗಿ ಕೆ.ಜಿ.ರಸ್ತೆ, ಜೆ.ಸಿ.ರಸ್ತೆ, ಕೆ.ಎಚ್‌.ರಸ್ತೆ, ಕೆ.ಆರ್‌.ಮಾರುಕಟ್ಟೆ, ಎಂ.ಜಿ.ರಸ್ತೆ, ಕೆ.ಆರ್‌.ಪುರ, ರಿಚ್ಮಂಡ್‌ ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಮೆಜೆಸ್ಟಿಕ್‌ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಕಚೇರಿಯಿಂದ ಮನೆಗೆ ಹೊರಡುವ ಧಾವಂತದಲ್ಲಿದ್ದ ಉದ್ಯೋಗಿಗಳು ಮಳೆಯಲ್ಲಿ ತೋಯ್ದು ಹೋದರು.

ಬಿಟಿಎಂ 2ನೇ ಹಂತದ 4ನೇ ಅಡ್ಡರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿತ್ತು. ಇದರಿಂದ ವಾಹನಗಳ ಓಡಾಟಕ್ಕೆ ತೊಡಕುಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಸಿಬ್ಬಂದಿಯು ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮದಿಂದ ಹಿಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಹಗಲಿನಲ್ಲಿ ಆಗಾಗ್ಗೆ ಬಿಸಿಲು ಕಂಡುಬಂದಿದ್ದು, ಬಹುತೇಕ ಸಮಯ ಮೋಡ ಕವಿದ ವಾತಾವರಣವಿತ್ತು. ಸಂಜೆಯಿಂದ ಮಳೆ ಶುರುವಾಯಿತು.

ಬಿಬಿಎಂಪಿಯ ಪ್ರತಿ ವಲಯದಲ್ಲಿ ನಿಯಂತ್ರಣ ಕೊಠಡಿಯಿದ್ದು, ಸಾರ್ವಜನಿಕರು ದೂರು ನೀಡಬಹುದು. ಅಲ್ಲದೇ ಕೇಂದ್ರ ಕಚೇರಿಗೆ (080 2297 5595) ಕೂಡ ಕರೆ ಮಾಡಬಹುದು.

Comments are closed.