ಕರ್ನಾಟಕ

12 ಗಂಟೆಗಳ ಕಾಲ ಭಾರಿ ಮಳೆ : 25 ವರ್ಷಗಳ ಬಳಿಕ ತುಂಬಿ ಹರಿದ ಹಳ್ಳ

Pinterest LinkedIn Tumblr

ಬನಹಟ್ಟಿ (ಬಾಗಲಕೋಟೆ) : ರಬಕವಿ ಬನಹಟ್ಟಿ ಅವಳಿ ನಗರದಾದ್ಯಂತ 12 ಗಂಟೆಗಳ ಕಾಲ ಭಾರಿ ಮಳೆ ಸುರಿದಿದ್ದು, ಸುಮಾರು 25 ವರ್ಷಗಳ ಹಿಂದೆ ತುಂಬಿ ಹರೆದಿದ್ದ ಹಳ್ಳ ಈಗ ಮತ್ತೊಮ್ಮೆ ತುಂಬಿ ಹರಿಯುತ್ತಿದೆ.

ರಬಕವಿ ಸಮೀಪದ ಹೋಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಕಳೆದ 2 ತಿಂಗಳ ಹಿಂದೆ ಕೃಷ್ಣಾ ಪ್ರವಾಹದಿಂದ ಬೆಳೆ ಹಾನಿ ಸಂಬವಿಸಿತ್ತು. ಈಗ ಮತ್ತೋಮ್ಮೆ ರೈತರ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ರಬಕವಿ-ಆಸಂಗಿ ಸಂಪರ್ಕ ಸೇತುವೆ ಕುಸಿದಿದ್ದು ನೀರು ತುಂಬಿ ಹರಿಯುತ್ತಿದೆ. ಅಲ್ಲದೇ ಸಮೀಪದ ಹೊಲಗಳಿಗೆ ತೆರಳುವ ಸಂಪರ್ಕ ರಸ್ತೆಗಳು ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಬಂದ್ ಆಗಿವೆ.

ರಬಕವಿ-ಬನಹಟ್ಟಿ ನಗರಗಳಲ್ಲಿ ಕಳೆದ ರವಿವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ 12 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ.

ರಾತ್ರಿಯಿಡೀ ಅಪಾರ ಪ್ರಮಾಣದ ಮಳೆ ಸುರದಿದೆ. ಇದು ಕಳೆದ ಹಲವು ದಶಕಗಳ ನಂತರ ಸುರಿದ ಭಾರಿ ಮಳೆಯಾಗಿದೆ. ಮಳೆಯ ಪರಿಣಾಮ ಸಮೀಪದ ಹಳ್ಳದ ಪ್ರದೇಶಗಳು ತುಂಬಿ ಹರಿಯುತ್ತಿವೆ. ಬನಹಟ್ಟಿ ಹಳ್ಳಕ್ಕೆ ಕಳೆದ 25 ವರ್ಷಗಳಿಂದ ಇಷ್ಟು ನೀರು ಹರಿದು ಬಂದಿಲ್ಲ. ಈಗ ಒಮ್ಮೇಲೆ ನೀರು ಹರಿದು ಬರುತ್ತಿರುವುದನ್ನು ನೋಡಲು ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಅಪಾರ ಪ್ರಮಾಣದ ನೀರನ್ನು ಹರಿದು ಬೀಡುತ್ತಿರುವುದರಿಂದ ಹಳ್ಳಗಳು ತುಂಬಿ ಹರಿಯುತ್ತಿದೆ.

ಕಬ್ಬು, ಈರುಳ್ಳಿ, ಮೆಕ್ಕೆಜೋಳ, ಅರಿಷಿಣ, ತರಕಾರಿ, ಹೂ, ದನಕರಗಳ ಮೇವುಗಳು ಸೇರಿದಂತೆ ಇತರ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿವೆ. ಬೆಳೆಗಳು ಜಲಾವೃತಗೊಂಡು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸಾಲ ಮಾಡಿ ಬೆಳೆದ ಬೆಳೆ ನೀರು ಪಾಲಾಗಿದ್ದರಿಂದ ರೈತರಿಗೆ ದಿಕ್ಕೇ ತೋಚದಂತಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Comments are closed.