ಕರ್ನಾಟಕ

ಕೊನೆಗೊಂಡ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

Pinterest LinkedIn Tumblr


ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ಮುಕ್ತಾಯವಾಗಿದ್ದು, ದೆಹಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಜಾಮೀನು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಅವರು ಆದೇಶ ಕಾಯ್ದಿರಿಸಿದ್ದಾರೆ.

ಇಂದು ಕೋರ್ಟ್ ಕಲಾಪಕ್ಕೆ ತಡವಾಗಿ ಆಗಮಿಸಿದ ಇಡಿ ಪರ ವಕೀಲ ಕೆ.ಎಂ. ನಟರಾಜ್ ಅವರು ನ್ಯಾಯಾಲಯ ಮತ್ತು ಪ್ರತಿವಾದಿಯ ಕ್ಷಮೆ ಕೇಳಿ, ವಾದ ಮಂಡನೆ ಆರಂಭಿಸಿದರು.

ಡಿ ಕೆ ಶಿವಕುಮಾರ್ ಅವರ ಪ್ರಕರಣ ಪಿಎಂಎಲ್​ಎ ವ್ಯಾಪ್ತಿಗೆ ಬರುತ್ತದೆ. ಐಟಿ ಕಾಯಿದೆ 120ಬಿ ಪ್ರಕಾರವೂ ವಿಚಾರಣೆ ನಡೆಸಲಾಗುತ್ತಿದೆ. ಪಿಎಂಎಲ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಬಹುದು, ಸೆಕ್ಷನ್ 2ಯು ಅಡಿಯಲ್ಲೂ ಬಂಧಿಸಬಹುದು. ಡಿಕೆಶಿ ಅಪರಾಧ ಮೂಲದಿಂದ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಹೇಳಿದಾಗ ನೀವು ಜಾಮೀನು ಅರ್ಜಿ ಬಗ್ಗೆ ಮಾತ್ರ ವಾದ ಮಾಡಿ. ಪ್ರಕರಣದ ಸಂಪೂರ್ಣ ವಿವರ ನಮಗೆ ಅಗತ್ಯವಿಲ್ಲ. ಡಿಕೆಶಿಗೆ ಏಕೆ ಜಾಮೀನು ನೀಡಬಾರದೆಂದು ಮಾತ್ರ ಹೇಳಿ ಎಂದು ನ್ಯಾಯಮೂರ್ತಿಗಳು ಕೆ.ಎಂ. ನಟರಾಜ್​ಗೆ ಸೂಚನೆ ನೀಡಿದರು.

ಇಡಿ ಪರ ವಕೀಲ ಕೆ.ಎಂ.ನಟರಾಜ್ ವಾದ ಮಂಡಿಸುತ್ತಾ, ಐಟಿ ನೀಡಿದ ಆಧಾರದ ಮೇಲೆ ED ವಿಚಾರಣೆ ಮಾಡುತ್ತಿದೆ. ಇನ್ನು ಡಿಕೆಶಿಗೆ ಸೇರಿದ 8.59 ಕೋಟಿ ರೂ. ಸಿಕ್ಕಿದೆ. ದೆಹಲಿಯ 3 ಜಾಗದಲ್ಲಿ 8.59 ಕೋ. ಸಿಕ್ಕಿದೆ. ಈ ಹಣದ ಬಗ್ಗೆ ಡಿಕೆಶಿ ಬಳಿ ಮಾಹಿತಿ ಇಲ್ಲ. ಐಟಿ ದೂರಿನ ಮೇಲೆ ಇಡಿ ತನಿಖೆ ಮಾಡುತ್ತಿದೆ ಎಂದರು.

ಇನ್ನು ಡಿಕೆ ಶಿವಕುಮಾರ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, ಡಿಕೆ ಶಿವಕುಮಾರ್ 7 ಬಾರಿ ಶಾಸಕರಾಗಿದ್ದವರು. ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರನ್ನು ಬಂಧಿಸುವುದಕ್ಕೂ ಮುನ್ನ 4 ದಿನಗಳ ಕಾಲ 35 ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿದೆ. ಬಳಿಕ 45 ದಿನಗಳ ಕಾಲ ಕಸ್ಟಡಿಯಲ್ಲಿ ಇಡಲಾಗಿದೆ. ಇದು ಬಂಧಿಸುವಂತಹ ಪ್ರಕರಣವೇ ಅಲ್ಲ ಎಂದು ವಾದಿಸಿದರು.

ಕರ್ನಾಟಕದಲ್ಲಿ ಶಾಸಕರ ಖರೀದಿ ನಡೆಯುತ್ತಿತ್ತು. ಡಿಕೆಶಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಶಾಸಕರ ಖರೀದಿ ತಡೆದರು. ಪಕ್ಷದ ಪರವಾಗಿ ಬಂಡೆಯಂತೆ ನಿಂತಿದ್ದರು. ಹಾಗಾಗಿ ಡಿಕೆಶಿ ಮೇಲೆ ಆರೋಪ ಮಾಡಲಾಗುತ್ತಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಬರೆದವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಕೆ.ಎಂ. ನಟರಾಜ್ ಕೂಡ ಇದನ್ನು ಒಪ್ಪುತ್ತಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಬರೆದ ಇಡಿ ಬಗ್ಗೆ ಸಿಂಘ್ವಿ ವ್ಯಂಗ್ಯ ಮಾಡಿದರು.

ಪಿಎಂಎಲ್ ಆ್ಯಕ್ಟ್ ಗೆ 2019ರಲ್ಲಿ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯಲ್ಲಿ ಕೇವಲ ಮೂರು ಪದ ಸೇರಿಸಲಾಗಿದೆ. ಈ ಮೂರು ಪದಗಳ ಸೇರ್ಪಡೆಯಿಂದ ಜಾಮೀನು ನಿರಾಕರಿಸಬಹುದಾಗಿದೆ. ವಾಸ್ತವವಾಗಿ ತಿದ್ದುಪಡಿಯೇ ಲೋಪದೋಷದಿಂದ ಕೂಡಿದೆ. ಇದಾದ ಮೇಲೆ ಮೂರು ಹೈಕೋರ್ಟ್ ಗಳು ಜಾಮೀನು ನೀಡಿವೆ. ಹಾಗಿದ್ದರೆ ಆ ಹೈಕೋರ್ಟ್ ಗಳು ನೀಡಿದ ಆದೇಶಗಳು ತಪ್ಪೇ? ಎಂದು ನ್ಯಾಯಾಲಯವನ್ನೇ ಪ್ರಶ್ನೆ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಆದೇಶವನ್ನು ಕಾಯ್ದಿರಿಸಿದೆ.

Comments are closed.