ಕರ್ನಾಟಕ

ಮೈಸೂರಿನ ಕನ್ನಡ ಶಾಲೆ ಉಳಿವಿಗೆ ಟೊಂಕಕಟ್ಟಿದ ಕಾಸರಗೋಡು ಚಿತ್ರತಂಡ

Pinterest LinkedIn Tumblr


ಮೈಸೂರು: ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ಚಿತ್ರದಲ್ಲಿ ಕನ್ನಡ ಶಾಲೆ ಉಳಿಸಲು ಮೈಸೂರಿನಿಂದ ಹೋರಾಟಗಾರ (ಅನಂತನಾಗ್) ಹೋಗಿ ಬೆಂಬಲ ನೀಡಿದ್ದರು. ಆದರೆ ಇದೀಗ ವಾಸ್ತವದಲ್ಲಿ ಮೈಸೂರಿನ ಕನ್ನಡ ಶಾಲೆ ಉಳಿಸಲು ಕಾಸರಗೋಡು ಚಿತ್ರತಂಡ ಟೊಂಕಕಟ್ಟಿ ನಿಂತಿದೆ.

ಅನ್ಯ ಭಾಷೆಯ ಪ್ರಭಾವ, ಲಾಬಿಗೆ ಮಣಿದು ಕನ್ನಡ ಶಾಲೆ ಮುಚ್ಚುವ ಹಂತದಲ್ಲಿದ್ದಾಗ ಅದನ್ನು ಉಳಿಸಲು ‘ಕಾಸರಗೋಡು ಸರ್ಕಾರಿ ಹಿರಿಯ ಶಾಲೆ’ ವಿದ್ಯಾರ್ಥಿಗಳೇ ಹೋರಾಟಕ್ಕಿಳಿಯುತ್ತಾರೆ. ಕಾಸರಗೂಡಿನಿಂದ ಬರುವ ವಿದ್ಯಾರ್ಥಿಗಳು, ಮೈಸೂರಿನಿಂದ ಹೋರಾಟಗಾರ ಅನಂತನಾಗ್ ಅವರನ್ನು ಕರೆಕೊಂಡು ಹೋಗಿ ಹಲವು ರೀತಿಯ ಹೋರಾಟ ಮಾಡಿ ಕೊನೆಗೆ ನ್ಯಾಯಾಲಯದ ಮೂಲಕ ಕನ್ನಡ ಶಾಲೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಈಗ ಇಂತಹದ್ದೇ ಸನ್ನಿವೇಶ ನಗರದ ಎನ್‌ಟಿಎಂ ಕನ್ನಡ ಶಾಲೆಗೂ ಬಂದಿದ್ದು, ಈ ಶಾಲೆಯ ಉಳಿವಿಗೀಗ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರತಂಡ ಬೆಂಬಲ ವ್ಯಕ್ತಪಡಿಸಿದೆ.

ಚಿತ್ರದ ನಿರ್ದೇಶಕ, ನಟ, ‘ಕಿರಿಕ್ ಪಾರ್ಟಿ’ ಖ್ಯಾತಿಯ ರಿಷಬ್‌ಶೆಟ್ಟಿ ಧ್ವನಿ ಎತ್ತಿದ್ದು, ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ ನಗರದ ಕನ್ನಡ ಪರ ಹೋರಾಗಾರರು, ಪ್ರಗತಿಪರರು, ವಿವಿಧ ಸಂಘ, ಸಂಸ್ಥೆಯವರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಎನ್‌ಟಿಎಂ ಕನ್ನಡ ಶಾಲೆಯನ್ನು ಉಳಿಸಲು ಕೇವಲ ಮೈಸೂರು ಮಾತ್ರವಲ್ಲ ಇಡೀ ರಾಜ್ಯದ ಜನತೆ ಕೈ ಜೋಡಿಸಬೇಕು ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.

Comments are closed.