ಕರ್ನಾಟಕ

ಏನು ಮಾತನಾಡದೇ ಇರುವಂತೆ ಶಾಸಕ ಯತ್ನಾಳ್​​ಗೆ ಸೂಚಿಸಿದ್ದೇನೆ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು(ಅ.15): ಯಾವುದೇ ರೀತಿಯ ಹೇಳಿಕೆ ನೀಡದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಸಿಎಂ, ಯತ್ನಾಳ್​ಗೆ ಏನು ಮಾತಾಡಬೇಡ ಎಂದು ಹೇಳಿದ್ದೇನೆ. ಇನ್ನೊಮ್ಮೆ ನಮ್ಮ ಶಾಸಕರು ವಿವಾದಾತ್ಮಕ ಹೇಳಿಕೆ ನೀಡೋದಿಲ್ಲ ಎಂದರು.

ಈ ಹಿಂದೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ರಾಜ್ಯದ 25 ಸಂಸದರು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದು ಸ್ವಪದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​​ಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಇದು ಪ್ರಜಾತಂತ್ರ ದೇಶ. ಇಲ್ಲಿ ಯಾರೂ ಯಾರಿಗೂ ಭಯಪಡಬಾರದು. ಪ್ರಧಾನಿ ಮೋದಿ ಯಾರನ್ನೂ ಹೆದರಿಸುವವರಲ್ಲ. ಗುಜರಾತ್ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ. ಸಂಸದರು ಮೌನ ವಹಿಸುವುದು ಸರಿಯಲ್ಲ. ಒಬ್ಬರು ಹುಬ್ಬಳ್ಳಿ, ಮತ್ತೊಬ್ಬರು ಬೆಂಗಳೂರು. ಹೀಗೆ ಒಬ್ಬೊಬ್ಬರು ಒಂದೊಂದು ಕಡೆ ಇದ್ದೀರಿ. ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿಗೊಳಿಸಿ,” ಎಂದು ಯತ್ನಾಳ್​​ ಆಗ್ರಹಿಸಿದ್ದರು.

ಇಂದು ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಅನಂತಕುಮಾರ್​​​ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ. ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನು ಹೇಗೆ ಭೇಟಿ ಮಾಡಿಸುತ್ತಾರೆ? ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೂಡ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ, ಪ್ರಧಾನಿಯವರ ಭೇಟಿಗೆ ಅವಕಾಶ ಕೊಡಿಸಲಿ. ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ. ಕೇಂದ್ರದಿಂದ ರೂ. 10000 ಕೋ. ಪರಿಹಾರ ತರಲಿ ಎಂದು ಒತ್ತಾಯಿಸಿದ್ದರು.

ಯತ್ನಾಳ್​​ರ ಹೇಳಿಕೆ ಬಿಜೆಪಿಗೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಈಗಾಗಲೇ ಪರಿಹಾರ ವಿಚಾರವಾಗಿ ರಾಜ್ಯದ ಜನರಲ್ಲಿ ಬಿಜೆಪಿ ಬಗ್ಗೆ ವ್ಯತಿರಿಕ್ತ ಭಾವನೆ ಉಂಟಾಗಿದೆ. ಈ ನಡುವೆ ಸ್ವಪಕ್ಷೀಯರೇ ಈ ರೀತಿಯಾಗಿ ಹೇಳಿಕೆ ಯತ್ನಾಳ್​​ ನೀಡಿದ್ದರ ಸುತ್ತ ಭಾರೀ ಚರ್ಚೆ ನಡೆದಿತ್ತು.

Comments are closed.