ಕರ್ನಾಟಕ

ಬೆಳೆಹಾನಿಗೆ ಹೆಚ್ಚುವರಿ ಪರಿಹಾರ: ಯಡಿಯೂರಪ್ಪ

Pinterest LinkedIn Tumblr


ಬೆಳಗಾವಿ: ಬೆಳೆಹಾನಿಗೆ ದೇಶದಲ್ಲಿಯೇ ಮೊದಲ ಬಾರಿಗೆ ಅತೀ ಹೆಚ್ಚು ಪರಿಹಾರವನ್ನು ನೀಡಲಾಗುತ್ತಿದೆ. ಒಣ ಹಾಗೂ ನೀರಾವರಿ ಆಶ್ರಿತ ಬೆಳೆಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಹತ್ತು ಸಾವಿರ ರೂ. ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಣ ಬೇಸಾಯದ ಬೆಳೆಗೆ ಮೊದಲು ಆರು ಸಾವಿರ ಹಾಗೂ ನೀರಾವರಿ ಬೆಳೆಗೆ 13 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಇದೇ ಮೊದಲ ಸಲ ಹತ್ತು ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.

ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ಈಗಾಗಲೇ ಐದು ಲಕ್ಷ ರೂಪಾಯಿ ಘೋಷಿಸಲಾಗಿದ್ದು, ಇಷ್ಟೊಂದು ಪರಿಹಾರ ನೀಡುತ್ತಿರುವುದು ಕೂಡ ಇದೇ ಮೊದಲ ಬಾರಿ ಎಂದರು.

ಔರಾದಕರ ವರದಿ ಶೀಘ್ರ ಜಾರಿ: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಔರಾದಕರ ವರದಿಯನ್ನು ತಕ್ಷಣ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವ ಬಗ್ಗೆ ಚರ್ಚೆ ನಡೆದಿದ್ದು, ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮಹಾರಾಷ್ಟ್ರ ರಾಜ್ಯದ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ನಗರಕ್ಕೆ ಆಗಮಿಸಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಲಾಯಿತು.
ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ ಇತರರು ಇದ್ದರು.
ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಬಿ‌.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಜರಿದ್ದರು.

ಬೆಳಗಾವಿ ನಗರದ ಪ್ರವಾಸಿಮಂದಿರದಲ್ಲಿ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿಗಳು, ಅ. 16ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

Comments are closed.