ಕರ್ನಾಟಕ

ಇನ್ನು ಎರಡು ದಿನದಲ್ಲಿ ಕೇಂದ್ರದಿಂದ ನೆರೆ ಪರಿಹಾರ ಹಣ: ನಳಿನ್

Pinterest LinkedIn Tumblr


ಕೋಲಾರ(ಅ. 04): ಪ್ರವಾಹ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ಸಿಗುವುದು ವಿಳಂಬವಾಗುತ್ತಿದೆ ಎಂಬ ಕೂಗು ಬಲವಾಗುತ್ತಿರುವ ಹೊತ್ತಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನೆರಡು ದಿನದಲ್ಲಿ ಕೇಂದ್ರದಿಂದ ನೆರೆ ಪರಿಹಾರ ಹಣ ಸಿಗಲಿದೆ ಎಂದು ಕಟೀಲ್ ಭರವಸೆ ನಿಡಿದ್ದಾರೆ.

ನಿನ್ನೆಯಷ್ಟೇ ಕಟೀಲ್ ಅವರು ನೆರೆ ಪರಿಹಾರ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ಕೇವಲ ನಮಸ್ಕಾರ ಎಂದು ಹೇಳಿ ಹೋಗಿದ್ದರು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಸೂಕ್ತ ವೇದಿಕೆಯಲ್ಲಿ ಮಾತ್ರ ಇಂಥ ವಿಚಾರ ಮಾತನಾಡುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಬಾರದು ಎಂದು ಹೈ ಕಮಾಂಡ್ ತನಗೆ ಸೂಚಿಸಿಲ್ಲ. ಆದರೆ, ಇದೇ ವಿಚಾರದ ಬಗ್ಗೆ ಮತ್ತೆ ಮತ್ತೆ ಹೇಳೋದು ಯಾಕೆ ಎಂದು ತಾನು ಮಾತನಾಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಮುಳಬಾಗಿಲು ಪಟ್ಟಣದಿಂದ ಬೆಂಗಳೂರಿಗೆ ತೆರಳುವ ವೇಳೆ ಕಟೀಲ್ ಈ ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ, ಕೋಲಾರದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಅವರೂ ಕೂಡ ಕೇಂದ್ರಿಂದ ಮೂರು ದಿನದಲ್ಲಿ ನೆರೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಸಿಕ್ಕಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರು, ಕಾಂಗ್ರೆಸ್ ಬಂಡವಾಳ ತನಗೆ ಗೊತ್ತಿದೆ. ಅವರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಈ ಹಿಂದಿನ ನೆರೆ ಹಾನಿ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಯಾವ ರೀತಿಯಲ್ಲಿ ಪರಿಹಾರ ಕೊಟ್ಟಿದೆ ಎಂಬುದು ಗೊತ್ತು. ಅವರ ಬಂಡವಾಳ ನಮಗೂ ತಿಳಿದಿದೆ ಎಂದು ಕುಟುಕಿದ್ದಾರೆ.

ಕೇಂದ್ರ ಸರ್ಕಾರ ಸದ್ಯಕ್ಕೆ ಯಾವ ರಾಜ್ಯಕ್ಕೂ ನೆರೆ ಪರಿಹಾರ ಕೊಟ್ಟಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪರಿಹಾರ ಹಣ ತರಲು ಪ್ರಯತ್ನಿಸುತ್ತಿದ್ಧಾರೆ. ಈ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ ಎಂದು ಎಸ್. ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

Comments are closed.