ಕರ್ನಾಟಕ

ಹುಡುಗಿಯರ ತಂಟೆಗೆ ಹೋದರೆ, ತಂಟೆಕೋರ ಹುಡುಗರಿಗೆ ಕಾದಿದೆ ಇನ್ನು ಮುಂದೆ ಮಾರಿ ಹಬ್ಬ.

Pinterest LinkedIn Tumblr

ದಾವಣಗೆರೆ, ಅಕ್ಟೋಬರ್ 02: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹುಡುಗರು ಇನ್ನು ಮುಂದೆ ಯುವತಿಯರನ್ನು ಚುಡಾಯಿಸುವ ಮುನ್ನ ಹುಷಾರಾಗಿರಬೇಕು. ಹುಡುಗಿಯರ ತಂಟೆಗೆ ಹೋದರೆ ತಂಟೆಕೋರ ಹುಡುಗರಿಗೆ ಕಾದಿದೆ ಮಾರಿ ಹಬ್ಬ.

ಹುಡುಗಿಯರನ್ನು ಚುಡಾಯಿಸುವ ಪುಂಡಪೋಕರಿಗಳನ್ನು ಮಟ್ಟ ಹಾಕಲೆಂದೇ ಹೊಸ ಪಡೆಯೊಂದು ಇದೀಗ ರಸ್ತೆಗಿಳಿದಿದೆ. ಹುಡುಗರ ಪುಂಡಾಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಲು ಈ ಪಡೆ ಸಜ್ಜುಗೊಂಡಿದೆ. ಅದೇ ದುರ್ಗಾ ಪಡೆ.

ಕೆಲ ಯುವಕರು ಗುಂಪು ಕಟ್ಟಿಕೊಂಡು ಶಾಲಾ ಕಾಲೇಜು, ಬಸ್‍ಸ್ಟ್ಯಾಂಡ್, ಜನನಿಬೀಡ ಪ್ರದೇಶಗಳಲ್ಲಿ ಯುವತಿಯರನ್ನು ರೇಗಿಸುವುದು ನಗರದಲ್ಲಿ ಹೆಚ್ಚಾಗುತ್ತಿದೆ. ಇಂತಹ ಗುಂಪುಗಳನ್ನು ಮಟ್ಟ ಹಾಕಲೆಂದೇ ದುರ್ಗಾ ಪಡೆ ಸಜ್ಜಾಗಿದೆ. ಪುಂಡ ಯುವಕರಿಗೆ ಕಡಿವಾಣ ಹಾಕುವುದು, ಯುವತಿಯರಿಗೆ, ಮಹಿಳೆಯರಿಗೆ ರಕ್ಷಣೆ ನೀಡುವುದು ದುರ್ಗಾ ಪಡೆಯ ಕಾರ್ಯ. ದುರ್ಗಾ ಪಡೆಯಲ್ಲಿ ಎಎಸ್‌ಐ ಸೇರಿದಂತೆ 15 ಜನ ಸಿಬ್ಬಂದಿಗಳಿದ್ದು ದಾವಣಗೆರೆ ನಗರದಾದ್ಯಂತ ಈ ವಾಹನ ಗಸ್ತು ತಿರುಗಲಿದೆ.

ಯುವತಿಯರನ್ನು ಚುಡಾಯಿಸುವ ಪೋಕರಿಗಳಿಗೆ ಕಡಿವಾಣ ಹಾಕಲೆಂದು ನಿರ್ಭಯ ಯೋಜನೆಯಡಿ ದುರ್ಗಾ ಪಡೆ ಸಿದ್ದ ಪಡಿಸಲಾಗಿದೆ. ಇದಕ್ಕಾಗಿಯೇ ಒಂದು ವಾಹನವನ್ನು ಮೀಸಲಿಡಲಾಗಿದ್ದು, ಇದು ಪುಂಡರಿಗೆ ಎಡೆ ಮುರಿ ಕಟ್ಟಲು ಸಜ್ಜಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸಿದು, ನಿರ್ಗತಿಕ ಮಕ್ಕಳ ರಕ್ಷಣೆ ಸೇರಿದಂತೆ ಡ್ರಗ್ಸ್ ಮಾರಾಟ ತಡೆಯುವ ಕೆಲಸವನ್ನು ಈ ದುರ್ಗಾ ಪಡೆ ಮಾಡಲಿದೆ.

ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾದರೆ ಸಹಾಯವಾಣಿಯನ್ನು ಕೂಡ ದುರ್ಗಾ ಪಡೆ ಆರಂಭಿಸಿದೆ. 100 ಮತ್ತು 08192-253088 ಈ ನಂಬರ್ ಗೆ ಪೋನ್ ಮಾಡಿದರೆ ಸಾಕು ದುರ್ಗಾ ಪಡೆ ಅಲ್ಲಿಗೆ ಹಾಜರಾಗಿ ಬಿಡುತ್ತದೆ.

Comments are closed.