ಕರ್ನಾಟಕ

ಅಕ್ರಮ ಡಿನೋಟಿಫಿಕೇಷನ್​ ಪ್ರಕರಣ: ರದ್ದುಗೊಳಿಸುವಂತೆ ಹೈಕೋರ್ಟ್​ ಮೆಟ್ಟಿಲೇರಿದ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು(ಸೆ.20): ಅಕ್ರಮ ಡಿನೋಟಿಫಿಕೇಷನ್​ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಹೈಕೋರ್ಟ್​​ ಮೆಟ್ಟಿಲೇರಿದ್ದಾರೆ. 2007ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಹಲಗೆ ವಡೇರಹಳ್ಳಿಯ 2 ಎಕರೆ 34 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್​ ಮಾಡಿದ್ದೇನೆ ಎಂದು ಆರೋಪ ಮಾಡಲಾಗುತ್ತಿದೆ. ಈ ಸಂಬಂಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್​​ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅರ್ಜಿ ಸಲ್ಲಿದ್ದಾರೆ.

ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯವೂ ಅಕ್ರಮ ಡಿನೋಟಿಫಿಕೇಷನ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್​ ಡಿ ಕುಮಾರಸ್ವಾಮಿ ಅವರಿಗೆ ಸಮನ್ಸ್​ ಜಾರಿ ಮಾಡಿತ್ತು. ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ನಡೆದಿದೆ ಎನ್ನಲಾದ ಡಿನೋಟಿಫಿಕೇಷನ್​ ಸಂಬಂಧ ಅಕ್ಟೋಬರ್​ 4ರಂದು ವಿಚಾರಣೆಗೆ ಹಾಜರಾಗುವಂಗತೆ ನ್ಯಾಯಾಲಯ ಗುರುವಾರ ಸಮನ್ಸ್​ ಜಾರಿಗೊಳಿಸಿತ್ತು.

ಏನಿದು ಪ್ರಕರಣ?: 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಲಗೆ ವಡೇರಹಳ್ಳಿಯ 2 ಎಕರೆ 34 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್​ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2012ರಲ್ಲಿ ಅಧಿಕೃತವಾದ ದೂರು ದಾಖಲಾಗಿತ್ತು. ಬನಶಂಕರಿ ಐದನೇ ಹಂತದಲ್ಲಿರುವ ಹಲಗೆ ವಡೇರಹಳ್ಳಿಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್​ ಮಾಡಿದ್ದಾರೆ ಎಂದು ಚಾಮರಾಜನಗರದ ಸಂತೇಮರಹಳ್ಳಿಯ ಮಹದೇವಸ್ವಾಮಿ ಎಂಬುವವರು ದೂರು ಸಲ್ಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2019ರ ಆರಂಭದಲ್ಲಿ ಬಿ ರಿಪೋರ್ಟ್​ ಸಲ್ಲಿಸಿದ್ದರು. ಆ ಮೂಲಕ ಕುಮಾರಸ್ವಾಮಿ ಅವರಿಗೆ ರಿಲೀಫ್​ ಸಿಕ್ಕಿತ್ತು. ಆದರೆ ದೂರುದಾರ ಮಹದೇವಸ್ವಾಮಿ ಬಿ ರಿಪೋರ್ಟ್​ ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. 2012ರಲ್ಲಿ ಪ್ರಕರಣ ದಾಖಲಾಗಿದ್ದರೂ ಕ್ರಮ ಕೈಗೊಳ್ಳದೇ, ಈಗ ಇದ್ದಕ್ಕಿದ್ದಂತೆ ಬಿ ರಿಪೋರ್ಟ್​ ಸಲ್ಲಿಸಿರುವ ಬಗ್ಗೆ ನ್ಯಾಯಾಧೀಶರು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದರು. ಇದೀಗ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ ಸಮನ್ಸ್​ ಜಾರಿಗೊಳಿಸಿದೆ.

Comments are closed.