ಕರ್ನಾಟಕ

ಯುವತಿಯೊಂದಿಗೆ ವಿದ್ಯಾವಾರಿಧಿ ಸ್ವಾಮಿ ಸರಸ ಸಲ್ಲಾಪ ಬಯಲು

Pinterest LinkedIn Tumblr


ಯಾದಗಿರಿ/ಬೆಂಗಳೂರು(ಸೆ. 18): ಕಾವಿಧಾರಿಗಳ ಕಾಮಲೀಲೆಗಳ ಪುರಾಣಗಳ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಯಾದಗಿರಿಯ ಪ್ರತಿಷ್ಠಿತ ಕಣ್ವ ಮಠದ ಸ್ವಾಮೀಜಿ ವಿದ್ಯಾವಾರಿಧಿ ತೀರ್ಥ ಅವರ ಕಾಮಕಾಂಡದ ಸಂದೇಶ ಮತ್ತು ವಿಡಿಯೋಗಳು ಬಯಲಾಗಿವೆ. ವಿದ್ಯಾವಾರಿಧಿ ಸ್ವಾಮೀಜಿ ಹನಿಟ್ರ್ಯಾಪ್​ನಲ್ಲಿ ಸಿಕ್ಕಿಬಿದ್ದಿದ್ದಾರೆ. ಚಾತುರ್ಮಾಸ್ಯದಲ್ಲಿರುವಾಗಲೇ ಯುವತಿಯನ್ನು ಸ್ವಾಮೀಜಿ ಮಂಚಕ್ಕೆ ಕರೆದದ್ದು, ಆಕೆಯೊಂದಿಗೆ ಅನೇಕ ಅಶ್ಲೀಲ ಸಂಭಾಷಣೆ ನಡೆಸಿರುವುದು ಈ ಹನಿಟ್ರ್ಯಾಪ್​ನಿಂದ ಗೊತ್ತಾಗಿದೆ. ಪ್ರಕರಣವು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಸ್ವಾಮೀಜಿ ಪೀಠ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಯಾದಗಿರಿಯ ಹುಣಸಿಹೊಳಿ ಕಣ್ವಮಠಕ್ಕೆ ರಾಜ್ಯಾದ್ಯಂತ ವಿವಿಧೆಡೆ ಶಾಖಾ ಮಠಗಳಿವೆ. ಯಲಹಂಕದಲ್ಲಿರುವ ಅಂಥ ಒಂದು ಶಾಖಾ ಮಠದಲ್ಲಿ ಸ್ವಾಮೀಜಿಗೆ ಹನಿಟ್ರ್ಯಾಪ್ ಮಾಡಲಾಗಿದೆ. ಚಾತುರ್ಮಾಸ್ಯಕ್ಕೆ ಬಂದಿದ್ದ ಸ್ವಾಮೀಜಿ ಜೊತೆ ಸಂಗೀತಾ ಎಂಬ ಮಹಿಳೆ ಸ್ನೇಹ ಬೆಳೆಸುತ್ತಾಳೆ. ಇಬ್ಬರ ಸ್ನೇಹವು ಕಾಮಕ್ಕೆ ತಿರುಗಿ ಮೊಬೈಲ್ ಮೂಲಕ ಅಶ್ಲೀಲ ಸಂದೇಶ, ಸಂಭಾಷಣೆಗಳು ವಿನಿಮಯವಾಗುತ್ತದೆ. ವಿಡಿಯೋ ಕಾಲ್ ಮೂಲಕವೂ ಇಬ್ಬರೂ ಸೆಕ್ಸ್ ಚ್ಯಾಟಿಂಗ್ ಮಾಡುತ್ತಾರೆ. ಇವೆಲ್ಲವನ್ನೂ ಆ ಮಹಿಳೆ ರೆಕಾರ್ಡ್ ಮಾಡಿಕೊಂಡಿದ್ಧಾಳೆ.

2014ರಲ್ಲಿ ಕಣ್ವ ಮಠದ ಪೀಠ ಏರಿದ್ದ ವಿದ್ಯಾವಾರಿಧಿ ತೀರ್ಥರ ಬಗ್ಗೆ ಗೊತ್ತಿರುವವರೇ ಈ ಕೆಲಸ ಮಾಡಿದ್ದಾರೆ. ಸಂಗೀತಾ ಎಂಬ ಈ ಮಹಿಳೆ ಮೂಲಕ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಎಲ್ಲಾ ದಾಖಲೆ ಸಂಗ್ರಹಗೊಂಡ ಬಳಿಕ ಶ್ರೀಪಾದ ಎಂಬಾತ ತಾನು ಸಂಗೀತಾಳ ಗಂಡ ಎಂದು ಹೇಳಿಕೊಂಡು ಸ್ವಾಮೀಜಿಯನ್ನು ಭೇಟಿಯಾಗುತ್ತಾನೆ. ನಿಮ್ಮಿಂದ ನನ್ನ ಸಂಸಾರ ಹಾಳಾಗಿದೆ. ಪರಿಹಾರ ಕೊಡಿ ಎಂದು ಹೇಳಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಡುತ್ತಾನೆ. ದುಡ್ಡು ಕೊಡದಿದ್ದರೆ ತನ್ನ ಬಳಿ ಇರುವ ವಿಡಿಯೋ ಮತ್ತಿತರ ದಾಖಲೆಗಳನ್ನ ಹೊರಗೆ ಬಿಡುವುದಾಗಿ ಬೆದರಿಕೆ ಒಡ್ಡುತ್ತಾನೆ. ಇದರಿಂದ ಹೆದರಿದ ವಿದ್ಯಾವಾರಿಧಿ ತೀರ್ಥರು ಚಾತುರ್ಮಾಸ ಮುಗಿದ 10 ದಿನದೊಳಗೆ 50 ಲಕ್ಷ ಕೊಡಲು ಒಪ್ಪಿಕೊಳ್ಳುತ್ತಾರೆ. ಆದರೆ, ಕೊಟ್ಟ ಮಾತಿನಂತೆ ಹಣ ಕೊಡದಿದ್ದಾಗ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ ವಿರುದ್ಧ ಕೆಲವಾರು ಆರೋಪಗಳಿವೆ. ಪೂರ್ವಾಶ್ರಮದಿಂದಲೂ ಅವರಿಗೆ ಕೆಲ ಮಹಿಳೆಯರೊಂದಿಗೆ ಅಕ್ರಮ ಸಂಬಂಧಗಳಿದ್ದವು ಎನ್ನಲಾಗಿದೆ. ಅವರಿಗೆ 2-3 ಮದುವೆಗಳೂ ಆಗಿವೆ. ಹಲವು ಜಿಲ್ಲೆಗಳಲ್ಲಿ ಮಠದ ಹೆಸರಿನ ಆಸ್ತಿಗಳನ್ನ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬಿತ್ಯಾದಿ ಆರೋಪಗಳು ಅವರ ಮೇಲಿವೆ.

ಇದೇ ವೇಳೆ, ವಿದ್ಯಾವಾರಿಧಿ ಸ್ವಾಮೀಜಿ ತಮ್ಮ ಮೇಲಿನ ಆರೋಪಗಳನ್ನ ಅಲ್ಲಗಳೆದಿದ್ದಾರೆ. ವಿಡಿಯೋದಲ್ಲಿ ತಾನಿರುವುದು ನಿಜ. ಆದರೆ, ಮಾತನಾಡಿರುವ ಧ್ವನಿ ತನ್ನದಲ್ಲ. ಮಠದಲ್ಲಿ ಯಾರೋ ವಿಡಿಯೋ ಚಿತ್ರೀಕರಣ ಮಾಡಿ ಸುಳ್ಳು ಧ್ವನಿ ಸೇರಿಸಿದ್ಧಾರೆ. ಆ ಮಹಿಳೆ ಯಾರು ಎಂಬುದೇ ಗೊತ್ತಿಲ್ಲ. ತನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರೋಪ ಎದುರಾಗಿರುವುದರಿಂದ ನೈತಿಕ ಹೊಣೆ ಹೊತ್ತು ಸ್ವಯಿಚ್ಛೆಯಿಂದ ಪೀಠ ತ್ಯಾಗ ಮಾಡುತ್ತೇನೆ. ಮಠದ ಅಭಿಮಾನಿಗಳೊಂದಿಗೆ ಸಮಾಲೋಚನೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತೇನೆ. ಆರೋಪ ಮುಕ್ತನಾದ ಬಳಿಕ ಮತ್ತೆ ಪೀಠ ಏರಬೇಕೋ ಬೇಡವೋ ಎಂಬುದನ್ನ ಆ ನಂತರ ನಿರ್ಧರಿಸುತ್ತೇನೆ. ಅಲ್ಲಿಯವರೆಗೂ ತಾನು ಧ್ಯಾನದಲ್ಲಿ ನಿರತನಾಗಿರುತ್ತೇನೆ ಎಂದು ಕಣ್ವಮಠದ ಶ್ರೀಗಳು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.

ಇದೇ ವೇಳೆ, ಸ್ವಾಮೀಜಿ ಕಾಮಕಾಂಡ ಪ್ರಕರಣ ಬಯಲಾಗುತ್ತಿದ್ದಂತೆಯೇ ಯಲಹಂಕದ ಕಣ್ವ ಶಾಖಾ ಮಠದಲ್ಲಿ ಭಕ್ತರಿಂದ ಪ್ರತಿಭಟನೆ ನಡೆದಿದೆ. ಕೆಲ ಭಕ್ತರು ಸ್ವಾಮೀಜಿ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಖಾ ಮಠವನ್ನು ಈಗ ಸಂಪೂರ್ಣ ಖಾಲಿ ಮಾಡಿ ಬೀಗ ಜಡಿಯಲಾಗಿದೆ.

Comments are closed.