
ಹುಬ್ಬಳ್ಳಿ: ಹುಬ್ಬಳ್ಳಿಯ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ರಾತ್ರೋ ರಾತ್ರಿ ಜನಜಂಗುಳಿ ಸೇರಿತ್ತು. ನಲ್ಲಮ್ಮ ದೇವಿ ಕಣ್ಣು ತೆರೆದಳು ಎಂದು ಸುದ್ದಿ ಹಬ್ಬಿದ್ದೇ ತಡ ಜನ ಪವಾಡ ನೋಡಲು, ಹೂವು ಹಣ್ಣು, ತೆಂಗಿನ ಕಾಯಿ, ಆರತಿ ತಟ್ಟೆ ಜೊತೆಗೆ ಓಡೋಡಿ ಬಂದರು. ಆದ್ರೆ ಕೆಲ ಹೊತ್ತಿನ ಬಳಿಕ ಪವಾಡದ ಹಿಂದಿನ ರಿಯಾಲಿಟಿ ಬಯಲಾಗಿದೆ.
ಹುಬ್ಬಳ್ಳಿಯ ಮಂಟೂರ್ ಬಳಿಯ ಶ್ರೀ ರಾಮ ದೇವಸ್ಥಾನದ ಬಳಿ ಇರುವ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಲ್ಲಮ್ಮ ದೇವಿ ಕಣ್ಣು ಬಿಟ್ಟು ಪವಾಡ ಸೃಷ್ಟಿಸಿದ್ದಾಳೆಂದು ಸುದ್ದಿಯಾಗಿತ್ತು. ಇದನ್ನು ನಂಬಿದ ಜನ ನಿಜವೆಂದು ತಿಳಿದು ತಾಯಿಯ ಪವಾಡ ನೋಡಲು ರಾತ್ರೋ ರಾತ್ರಿ ಓಡೋಡಿ ಬಂದಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅಲ್ಲಿನ ಸ್ಥಳೀಯರು ನಾವು ಚಿಕ್ಕ ವಯಸ್ಸಿನವರಿಂದಲೂ ಈ ದೇವಸ್ಥಾನಕ್ಕೆ ಬರುತ್ತೇವೆ. ತಾಯಿಗೆ ಪೂಜೆ ಸಲ್ಲಿಸುತ್ತೇವೆ. ಇಂದು ಪವಾಡವೇ ನಡೆದು ಹೋಗಿದೆ. ತಾಯಿ ಅದ್ಭುತ ಸೃಷ್ಟಿಸಿದ್ದಾಳೆ ಎಂದು ಭಕ್ತಿ ಪರವಶವಾಗಿ ಮಾತನಾಡಿದರು. ಆದ್ರೆ ಇದು ದೇವಿಯ ಪವಾಡವಲ್ಲ. ಖದೀಮರ ಪವಾಡದ ನಾಟಕ ಎಂಬುದು ಕೆಲ ಸಮಯದ ಬಳಿಕ ಗೊತ್ತಾಗಿದೆ.
ದೇವರಿಗೆ ಹಾಕಿದ್ದ ಬೆಳ್ಳಿ ಕಣ್ಣುಗಳನ್ನು ಕದ್ದ ಕಳ್ಳರು, ವಿಗ್ರಹಕ್ಕೆ ಪ್ಲಾಸ್ಟಿಕ್ ಕಣ್ಣುಗಳನ್ನು ಅಂಟಿಸಿದ್ದಾರೆ. ಹೀಗೆ ಪ್ಲಾಸ್ಟಿಕ್ ಕಣ್ಣು ಅಂಟಿಸಿದ ಕಾರಣ ವಿಗ್ರಹ ಥೇಟ್ ಕಣ್ಣು ಬಿಟ್ಟಂತೆ ಕಂಡಿದೆ. ದೇವಸ್ಥಾನದ ಅರ್ಚಕರು ಪೂಜೆ ಮಾಡಲು ಗುಡಿಗೆ ಬಂದಾಗ, ನಲ್ಲಮ್ಮ ದೇವಿ ಕಣ್ಣು ಬಿಟ್ಟ ಹಾಗೇ ಕಂಡಿದೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಈ ಸುದ್ದಿ ಭಾರೀ ಸದ್ದು ಮಾಡಿದ್ದು, ಪೊಲೀಸರ ಸಮ್ಮುಖದಲ್ಲೇ, ರಾಮ ದೇವಸ್ಥಾನದ ಟ್ರಸ್ಟಿಗಳಿಂದ ಸತ್ಯ ಬಯಲಾಗಿದೆ.
Comments are closed.