
ಆನೇಕಲ್ (ಆ. 24): ಇತ್ತೀಚೆಗೆ ದೇಶದಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದೆ. ಬೆಚ್ಚಿ ಬೀಳಿಸುವ ಘಟನೆಗಳು ನಮ್ಮ ನಡುವೆಯೇ ನಡೆಯುತ್ತಿರುತ್ತವೆ. ಅಂಥದ್ದೊಂದು ದುರ್ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಡೆದಿದೆ.
ಹೆಂಡತಿಯ ಹತ್ಯೆ ಮಾಡಿದ ಗಂಡ ಆಕೆಯ ಮೃತದೇಹವನ್ನು ಲಗೇಜ್ ಬ್ಯಾಗ್ನಲ್ಲಿಟ್ಟು ಮನೆಬಿಟ್ಟು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲಸ ಹುಡುಕಿಕೊಂಡು ಒರಿಸ್ಸಾದಿಂದ ಬೆಂಗಳೂರಿಗೆ ಬಂದಿದ್ದ ಸುನೀಲ್ ಕುಮಾರ್ ಮೊಹಂತಿ ಮತ್ತು ರೋಸಾಲಿಯಾ ಸರೋಜಿನಿ ಬಿರ್ಲಾ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಸಾಪುರದಲ್ಲಿ ಮನೆ ಮಾಡಿಕೊಂಡಿದ್ದರು. 2 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಈ ದಂಪತಿ ಶಿಫ್ಟ್ ಆಗಿದ್ದರು.
ಇದೇ ತಿಂಗಳ 14ನೇ ತಾರೀಕಿನಿಂದ ಸುನೀಲ್ ಕುಮಾರ್ ಅವರ ಮನೆಗೆ ಬೀಗ ಹಾಕಲಾಗಿತ್ತು. ಅಕ್ಕ-ಪಕ್ಕದ ಮನೆಯವರು ಅವರು ಊರಿಗೆ ಹೋಗಿರಬಹುದು ಎಂದು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಅದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಮನೆಯೊಳಗಿಂದ ಕೆಟ್ಟ ವಾಸನೆ ಬರಲಾರಂಭಿಸಿತು. ಸುತ್ತಮುತ್ತಲಿನ ಮನೆಯವರಿಗೆ ಆ ಕಡೆ ಓಡಾಡಲೂ ಅಸಾಧ್ಯವೆನಿಸುವ ವಾಸೆ ಎಲ್ಲೆಡೆ ಹರಡಿತು. ಇದರಿಂದ ಅನುಮಾನಗೊಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಮನೆಯ ಮಾಲೀಕರಿಂದ ನಕಲಿ ಕೀ ಪಡೆದು ಮನೆ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಕೊಲೆಯ ವಿಷಯ ಗೊತ್ತಾಗಿದೆ.
ಲಗೇಜ್ ಬ್ಯಾಗ್ನಲ್ಲಿ ಹೆಂಡತಿಯ ಹೆಣವನ್ನು ತುಂಬಿಸಿಟ್ಟು ಮನೆಗೆ ಬೀಗ ಹಾಕಿ ಸುನೀಲ್ ಕುಮಾರ್ ಮೊಹಂತಿ ಪರಾರಿಯಾಗಿದ್ದಾನೆ. ರೋಸಾಲಿಯಾ ಸರೋಜಿನಿ ಬಿರ್ಲಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆರೋಪಿ ಸುನೀಲ್ ಕುಮಾರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Comments are closed.