ಕರ್ನಾಟಕ

ಭೀಕರ ಪ್ರವಾಹ; ಮುಖ್ಯಮಂತ್ರಿ ಪರಿಹಾರ ನಿಧಿಗೆ ಹೆಚ್ಚಿನ ನೆರವು ನೀಡಲು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

Pinterest LinkedIn Tumblr

ಬಾಗಲಕೋಟೆ: ಕರ್ನಾಟಕದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗಿ ಹೆಚ್ಚಿನ ನೆರವು ನೀಡಲು ಕೈಗಾರಿಕೋದ್ಯಮಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ 10 ಕೋಟಿ ರೂ ತುರ್ತು ‌ನೆರವು ಬಿಡುಗಡೆ ಮಾಡಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಎಲ್ಲ ನೆರವು‌ ನೀಡಲಿದೆ. ಅಧಿಕಾರಿಗಳು ಹಗಲಿರುಳು ಶ್ರಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 63 ಹಳ್ಳಿಗಳು ಜಲಾವೃತವಾಗಿವೆ. 10 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಪ್ರವಾಹ ಪರಿಹಾರಕ್ಕಾಗಿ ಇನ್ಫೋಸಿಸ್ ನ ಸುಧಾಮೂರ್ತಿ 10 ಕೋಟಿ ರೂ, ಮಾಜಿ ಸಚಿವ ಮುರುಗೇಶ್‌ ನಿರಾಣಿ 1 ಕೋಟಿ ಹಾಗೂ ಕೆಎಂಎಫ್ 1 ಕೋಟಿ ರೂ ನೀಡಿದೆ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ದಾನಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು.

ಕೈಗಾರಿಕೋದ್ಯಮಿಗಳು ಹಾಗೂ ಇತರರು ಹೆಚ್ಚಿನ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಬೇಕು. ನಾನು ಒಬ್ಬಂಟಿ ಅಲ್ಲ, ಎಲ್ಲ ಶಾಸಕರು ಜೊತೆ ಇದ್ದಾರೆ. 2009 ರಲ್ಲಿ ಇದೇ ಸ್ಥಿತಿ ಇದ್ದಾಗ ದಾನಿಗಳಿಂದ ಒಂದು ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು, ಇಂದು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು.

ಅಂತೆಯೇ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ, ಈ ವಿಚಾರದಲ್ಲಿ ಹಿಂದಿನ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಬಾಗಲಕೋಟೆಯಲ್ಲಿ 63 ಗ್ರಾಮಗಳು ಜಲಾವೃತವಾಗಿವೆ, 6381 ಕುಟುಂಬಗಳ 28,126 ಜನರನ್ನು ಸ್ಥಳಾಂತರ ಮಾಡಲಾಗಿದೆ. 42 ಪರಿಹಾರ ಕೇಂದ್ರ ತೆರೆಯಲಾಗಿದೆ, 92 ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. 19,366 ಜಾನುವಾರಗಳನ್ನು ಸ್ಥಳಾಂತರ ಮಾಡಲಾಗಿದೆ. 107.05 ಮೆಟ್ರಿಕ್ ಟನ್ ಮೇವು ಸಂಗ್ರಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ 2 ಎನ್‌ಡಿಆರ್‌ಎಫ್, 2 ಎಸ್‌ಡಿಆರ್‌ಎಫ್, 2 ಸೇನಾ ತಂಡಗಳು ಸೇರಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಜಮೀನು ಮುಳುಗಡೆ ಆಗಿದ್ದು, ತಕ್ಷಣಕ್ಕೆ 10 ಕೋಟಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಇಂದು ಬೆಳ್ಳಿಗೆ ಶಾಸಕ ಮುರಗೇಶ ನಿರಾಣಿ ಅವರೊಂದಿಗೆ ಯಡಿಯೂರಪ್ಪ ಅವರು ಘಟಪ್ರಭಾ ನದಿಯ ಪ್ರವಾಹದಿಂದ ಸಂತ್ರಸ್ತರಾಗಿರುವ ಮುಧೋಳ ನಿವಾಸಿಗಳು ನೆಲೆಸಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ಅವರ ಅಹವಾಲು ಆಲಿಸಿದರು. ಶಾಶ್ವತ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುವಂತೆ ಸಂತ್ರಸ್ತರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Comments are closed.