ಕರ್ನಾಟಕ

ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆಗೆ 12 ಬಲಿ: ಕೃಷ್ಣಾ, ಭೀಮಾ, ಘಟಪ್ರಭಾ, ಅಘನಾಶಿನಿ, ಕಾಳಿ ನದಿಗಳ ಅಬ್ಬರ

Pinterest LinkedIn Tumblr


ಹುಬ್ಬಳ್ಳಿ: ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ವರುಣಾರ್ಭಟ, ‘ಮಹಾ’ಮಾರಿ ಮುಂದುವರೆದಿದೆ. ಪ್ರವಾಹಕ್ಕೆ ಬದುಕು ಕೊಚ್ಚಿ ಹೋಗಿದೆ. 50ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿ ಸಂಪರ್ಕ ಕಡಿತವಾಗಿದೆ. 12 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮಳೆ ಅನಾಹುತಕ್ಕೆ ಬುಧವಾರ 12 ಮಂದಿ ಬಲಿಯಾಗಿದ್ದಾರೆ.

ಕೃಷ್ಣಾ, ಭೀಮಾ, ದೂಧಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ವರದಾ, ತುಂಗಭದ್ರಾ, ಅಘನಾಶಿನಿ, ಕಾಳಿ, ಗಂಗಾವಳಿ, ಶರಾವತಿ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿಪಾತ್ರದಲ್ಲಿ ಬದುಕು ದುರ್ಬರವಾಗಿದೆ. ನೂರಾರು ಮನೆಗಳು ಕುಸಿದಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕೊಯ್ನಾದಿಂದ 1.09 ಲಕ್ಷ, ರಾಜಾಪುರ ಬ್ಯಾರೇಜ್‌ನಿಂದ 2.95 ಲಕ್ಷ ಸೇರಿ ವಿವಿಧ ಜಲಾಶಯ ಹಾಗೂ ನದಿಗಳಿಂದ ಕೃಷ್ಣಾ ನದಿಗೆ 5.76 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದೆ. ತೀರ ಪ್ರದೇಶದಲ್ಲಿನ ಜನರ ರಕ್ಷಣೆಗೆ ಹರಸಾಹಸ ನಡೆದಿದೆ. ಹಿಡಕಲ್ ಜಲಾಶಯದಿಂದ 90 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿದ್ದರಿಂದ ಗೋಕಾಕ ನಗರದ ಅರ್ಧ ಭಾಗ ಜಲಾವೃತವಾಗಿದೆ.

ಬೆಳಗಾವಿ ತಾಲೂಕಿನ ಚಂದನಹೊಸೂರ ಗ್ರಾಮದಲ್ಲಿ ಮನೆ ಕುಸಿದು ಯಲ್ಲೇಶ ಬಣ್ಣವರ, ಗೋಕಾಕ ತಾಲೂಕು ಲೋಸೂರ ಗ್ರಾಮದಲ್ಲಿ ಮಳೆಯಲ್ಲಿ ನೆನೆದಿದ್ದ ಪದ್ಮಾವತಿ ಪಾಟೀಲ(21) ತೀವ್ರ ಜ್ವರಕ್ಕೆ ತುತ್ತಾಗಿ ಮೃತಪಟ್ಟಿದ್ದಾಳೆ. ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಸವರಾಜ ಮಾನಿಕ ಕಾಂಬಳೆ(14) ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಾಳೂರುದಿಣ್ಣೆ ಬಳಿ ಮಳೆ ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಕಾರ್ಮಿಕ ಕುಮಾರ್‌ ಸಾವನಪ್ಪಿದ್ದಾನೆ.

ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದ ಶ್ರೀವತ್ಸ ಎಂಬ ಯುವಕ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಚಿಕ್ಕಮಾಗಡಿಯ ರೈತ ಲೇಕಪ್ಪ (45) ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಬಳಿ ತುಂಗಭದ್ರಾ ನದಿಯಲ್ಲಿ ಮಹಿಳೆಯೊಬ್ಬಳು ಹಾಗೂ ಹಾವೇರಿ ಜಿಲ್ಲೆಯ ಧರ್ಮಾ ಜಲಾಶಯದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದು, ಗುರುತು ಪತ್ತೆಯಾಗಿಲ್ಲ. ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ಜಲ್ಲಿಕಲ್ಲು ಕೆಲಸಕ್ಕೆ ಹೋಗಿದ್ದ ತಾಯಿ ಮಗಳು ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ಪಾರ್ವತಿ ರೂಪನವರ (68) ಮತ್ತು ಮಗಳು ಕೃಷ್ಣಾಭಾಯಿ ವಾಗ್ಮೋಡೆ ಮೃತರು.

ಮಲೆನಾಡು ತತ್ತರ, ಕರಾವಳಿಗೆ ರೆಡ್‌ಅಲರ್ಟ್‌
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಶೃಂಗೇರಿ ಶಾರದಾ ಪೀಠದ ಕಪ್ಪೆಶಂಕರ ದೇಗುಲ, ಸಂಧ್ಯಾವಂದನೆ ಮಂಟಪ ನೀರಿನಲ್ಲಿ ಮುಳುಗಿದ್ದರೆ, ಶ್ರೀ ಮಠದಿಂದ ನರಸಿಂಹವನಕ್ಕೆ ತೆರಳುವ ಮಾರ್ಗದಲ್ಲಿ ಪ್ರವಾಹದಿಂದ ನೀರು ತುಂಬಿದೆ. ಶಿವಮೊಗ್ಗದಲ್ಲಿ ಮಳೆ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ. ತೀರ್ಥಹಳ್ಳಿ ತಾಲೂಕು ಗುಡ್ಡೇಕೇರಿ-ಬಿದರಗೋಡು-ಶೃಂಗೇರಿ, ಸೊರಬದಲ್ಲಿ ಶಿಡ್ಡಿಹಳ್ಳಿ-ಸೊರಬ ರಸ್ತೆ ಸಂಚಾರ ಕಡಿತಗೊಂಡಿದೆ. ತುಂಗಾ ನದಿ ಅಪಾಯ ಮಟ್ಟ ಮೀರಿದ್ದು, ಗಾಜನೂರು ಅಣೆಕಟ್ಟೆಯ ಎಲ್ಲ ಗೇಟುಗಳಿಂದ ನೀರು ಹೊರಬಿಡಲಾಗುತ್ತಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುರುವಾರಕ್ಕೂ ರೆಡ್‌ ಅಲರ್ಟ್‌ ಘೋಷಣೆಯಾಗಿದೆ.
ರಜೆ ಮುಂದುವರಿಕೆ

ಪ್ರವಾಹ ಪೀಡಿತ ಬೆಳಗಾವಿ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆ.10ರವರೆಗೂ ರಜೆ ಮುಂದುವರಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಗುರುವಾರವೂ ರಜೆ ಇದ್ದರೆ, ಕೊಡಗು ಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ರಜೆ ಘೋಷಿಸಲಾಗಿದೆ.

ಕೊಡಗಲ್ಲೂ ಧಾರಾಕಾರ

ಮಲೆನಾಡಿಗೆ ಹೊಂದಿಕೊಂಡಂತಿರುವ ಕರಾವಳಿ, ಕೊಡಗು ಜಿಲ್ಲೆಯಲ್ಲೂ ವರುಣನ ಆರ್ಭಟ ಮುಂದುವರಿದಿದೆ. ಭಾಗಮಂಡಲ ಮುಳುಗಿದ ಹಾಗೆಯೇ ಇದೆ. ಜಿಲ್ಲೆಯ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಲವಾರು ಸೇತುವೆಗಳು ಮುಳುಗಿವೆ. ತ್ರಿವೇಣಿ ಸಂಗಮದಲ್ಲಿರುವ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಕಾವೇರಿ ಶಾಂತಳಾಗು ಎಂದು ವಿಶೇಷ ಪೂಜೆ ಸಲ್ಲಿಸಲಾಗಿದೆ.

Comments are closed.