ಕರ್ನಾಟಕ

ಅವಹೇಳನಕಾರಿ ಬರಹ; ನಟ ಪ್ರಕಾಶ್ ರೈ ಬಳಿ ಬಹಿರಂಗ ಕ್ಷಮೆ ಯಾಚಿಸಿದ ಸಂಸದ ಪ್ರತಾಪ್ ಸಿಂಹ !

Pinterest LinkedIn Tumblr

ಬೆಂಗಳೂರು: ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ಹಾಗೂ ಅವರ ಕೌಟುಂಬಿಕ ವಿಚಾರದ ಬಗ್ಗೆ ಅವಹೇಳನಕಾರಿಯಾದ ಬರಹವನ್ನು ಪ್ರಕಟಿಸುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೊನೆಗೂ ಈ ಕುರಿತು ಇಂದು ಟ್ವೀಟರ್​ನಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

ಟ್ವಿಟರ್​ನಲ್ಲಿ ನಟ ಪ್ರಕಾಶ್ ರೈ ಅವರ ಕ್ಷಮೆ ಕೋರಿರುವ ಪ್ರತಾಪ್ ಸಿಂಹ, “ಆತ್ಮೀಯ ಪ್ರಕಾಶ್ ರೈ ಅವರೆ, ನಿಮ್ಮ ಹಾಗೂ ನಿಮ್ಮ ಕುಟುಂಬದ ಮಾನಹಾನಿಯಾಗುವಂತಹ ಬರಹವನ್ನು ನಾನು 2017 ಆಕ್ಟೋಬರ್ 2 ಮತ್ತು 3 ರಂದು ಬರೆದಿದ್ದೆ. ಆದರೆ, ಇದು ಅನಗತ್ಯ ಮತ್ತು ಮನಸ್ಸಿಗೆ ನೋವು ತರುವ ವಿಚಾರ ಎಂದು ಈಗ ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ಈ ಟ್ವಿಟರ್ ಮತ್ತು ಎಫ್​ಬಿಯಲ್ಲಿ ಬರೆಯಲಾಗಿರುವ ಬರಹದ ಕುರಿತು ವಿಷಾಧಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರೈ, “ಧನ್ಯವಾದಗಳು ಪ್ರತಾಪ್ ಸಿಂಹ. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ವ್ಯಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದು ತಪ್ಪು. ನಾವು ಇಬ್ಬರೂ ಅವರವರ ಕ್ಷೇತ್ರದಲ್ಲಿ ವ್ಯಯಕ್ತಿಕವಾಗಿ ಉನ್ನತ ಮಟ್ಟಕ್ಕೆ ಏರಿದ್ದೇವೆ. ಹೀಗಾಗಿ ನಾವು ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕರ್ತವ್ಯ, ನಿಮಗೆ ಶುಭವಾಗಲಿ” ಎಂದು ತಿಳಿಸಿದ್ದಾರೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದ ಸಂದರ್ಭದಲ್ಲಿ ಪ್ರಕಾಶ್ ರೈ ಕೇಂದ್ರ ಸರ್ಕಾರ ಹಾಗೂ ಬಲಪಂಥೀಯ ಚಿಂತಕರ ವಿರುದ್ಧ ನಿರಂತರವಾಗಿ ಟೀಕಾಪ್ರಹಾರ ಮಾಡುತ್ತಲೇ ಇದ್ದರು. ಇದರಿಂದ ಕುಪಿತಗೊಂಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ನಟ ಪ್ರಕಾಶ್ ರೈ ಅವರನ್ನು ವ್ಯಯಕ್ತಿಕವಾಗಿ ನಿಂದಿಸಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಯಾಗುವಂತಹ ಬರಹವನ್ನು ಪೋಸ್ಟ್ ಮಾಡಿದ್ದರು.

ಹೀಗಾಗಿ ಪ್ರಕಾಶ್ ರೈ 1 ರೂ. ಪರಿಹಾರ ಕೋರಿ ಪ್ರತಾಪ್ ಸಿಂಹ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ. ಇಂದು ಪ್ರತಾಪ್ ಸಿಂಹ ತಮ್ಮ ತಪ್ಪಿನ ಅರಿವಾಗಿ ಟ್ವಿಟರ್ ಮೂಲಕ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಎರಡು ವರ್ಷದ ವೈಮನಸ್ಯ ಹಾಗೂ ಸಾಮಾಜಿಕ ಜಾಲತಣದಲ್ಲಿನ ಜಿದ್ದಾಜಿದ್ದಿ ಟೀಕಾಸ್ತ್ರಗಳಿಗೆ ಕೊನೆಗೂ ತೆರೆ ಎಳೆದಂತಾಗಿದೆ.

Comments are closed.