ಬೆಂಗಳೂರು (ಆ. 7): ರಾಜ್ಯದಲ್ಲಿ ಕಳೆದ 2 ವಾರಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೊಡಗಿನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಬರದ ಜಿಲ್ಲೆಗಳಾದ ಬಾಗಲಕೋಟೆ, ರಾಯಚೂರು, ಬೆಳಗಾವಿ, ವಿಜಯಪುರ, ಗದಗದಲ್ಲಿ ಈ ಬಾರಿ ಅತಿಯಾದ ಮಳೆಯಾಗುತ್ತಿದ್ದು, ನೆರೆಯ ರಾಜ್ಯ ಮಹಾರಾಷ್ಟ್ರದಲ್ಲೂ ಮಳೆ ಹೆಚ್ಚುತ್ತಲೇ ಇರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದೆ.
ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆವರೆಗೆ ಅತ್ಯಧಿಕ 369.5 ಮಿ.ಮೀ. ಮಳೆ ದಾಖಲಾಗಿದೆ. ಎರಡು ದಿನಗಳಿಂದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಇಂದು ಕೂಡ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಇದೇ ರೀತಿಯ ಮಳೆ ಉಂಟಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಜಲಾವೃತವಾಗಿರುವ ರಸ್ತೆಗಳು
ಮಹಾರಾಷ್ಟ್ರದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಇದರಿಂದ ಮಾರುತಗಳು ಹೆಚ್ಚು ತೇವಾಂಶದಿಂದ ಕೂಡಿರುತ್ತವೆ. ಹೀಗಾದಾಗ ಮಳೆಯ ಪ್ರಮಾಣವೂ ಹೆಚ್ಚುತ್ತದೆ. ಹೀಗಾಗಿ, ಇನ್ನು ಮೂರು ದಿನಗಳ ಕಾಲ ಕರಾವಳಿ, ಮಲೆನಾಡು ಭಾಗದಲ್ಲಿಯೂ ಮಳೆ ಜಾಸ್ತಿಯಾಗುವ ಸಾಧ್ಯತೆಯಿದೆ. ಮಳೆಪೀಡಿತ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದ್ದೇವೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಈಗಾಗಲೇ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ತೀರದ ಜನರು ಪ್ರವಾಹ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಲಪ್ರಭಾ ತೀರದ ಜನರಿಗೂ ಪ್ರವಾಹದ ಭೀತಿ ತಟ್ಟುವ ಸಾಧ್ಯತೆಯಿದೆ. ಮಲೆನಾಡಿನಲ್ಲಿ ಶರಾವತಿ, ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿವೆ. ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮಳೆಯಿಂದ ಚಾರ್ಮಾಡಿ ಘಾಟ್ ಮತ್ತು ಶಿರಾಡಿ ಘಾಟ್ ಎರಡೂ ಕಡೆ ಮರಗಳು ಬಿದ್ದಿರುವ ಹಿನ್ನೆಲೆಯಲ್ಲಿ ಹಾಸನ, ಚಿಕ್ಕಮಗಳೂರು ಕಡೆಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗುವ ಸಾಧ್ಯತೆಯಿದೆ.
Comments are closed.