ಕರ್ನಾಟಕ

ಅನರ್ಹತೆ ತೀರ್ಪಿನ ಬಳಿಕ ವಿಚಲಿತರಾಗಿದ ಆರ್. ಶಂಕರ್ ! ಅಜ್ಞಾತ ಸ್ಥಳದಲ್ಲಿ ವಾಸ್ತವ್ಯ!

Pinterest LinkedIn Tumblr

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರದಿಂದ ಶಾಸಕ ಆರ್. ಶಂಕರ್ ವಿಚಲಿತರಾಗಿದ್ದಾರೆಯೇ? ಹೀಗೊಂದು ಪ್ರಶ್ನೆ ಪ್ರಸ್ತುತ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಹೆಚ್.ಡಿ. ಕುಮಾರಸ್ವಾಮಿ ಮಂಗಳವಾರ ವಿಶ್ವಾಸಮತ ಯಾಚಿಸುವ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಪಕ್ಷೇತರ ಶಾಸಕ ಆರ್. ಶಂಕರ್ ನಿನ್ನೆಯವರೆಗೆ ಬೆಂಗಳೂರಿನಲ್ಲೇ ಇದ್ದರು. ಎಲ್ಲಾ ಬಿಜೆಪಿ ನಾಯಕರ ಸಂಪರ್ಕಕ್ಕೂ ಲಭ್ಯವಿದ್ದರು. ಆದರೆ, ನಿನ್ನೆ ಸಂಜೆ ಸ್ಪೀಕರ್ ಅವರನ್ನು ಅನರ್ಹಗೊಳಿಸುವ ತನ್ನ ತೀರ್ಮಾನವನ್ನು ಹೊರಹಾಕುತ್ತಿದ್ದಂತೆ ಆರ್. ಶಂಕರ್ ಸಂಪೂರ್ಣ ವಿಚಲಿತರಾಗಿದ್ದಾರೆ. ತನ್ನ ರಾಜಕೀಯ ಭವಿಷ್ಯದ ಕುರಿತು ಚಿಂತಾಕ್ರಾಂತರಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಮೂರು ವಾರದಿಂದ ಬಿಜೆಪಿ ನಾಯಕರ ಸುಪರ್ದಿಯಲ್ಲೇ ಇರುವ ಆರ್. ಶಂಕರ್, ಕಮ್ಮನಹಳ್ಳಿಯ ತಮ್ಮ ಖಾಸಗಿ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಆದರೆ, ಈಗ ಅಲ್ಲೂ ಇಲ್ಲ. ಅಲ್ಲದೆ ಪ್ರಸ್ತುತ ಬಿಜೆಪಿ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ, ಸ್ಪೀಕರ್ ತೀರ್ಪನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೊರೆಹೋಗಲು ಶಂಕರ್ ಈಗಾಗಲೇ ತಮ್ಮ ವಕೀಲರ ಮೂಲಕ ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.