
ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ, ಬಿಎಸ್ವೈ ನಾಯಕತ್ವದ ಬಿಜೆಪಿ ಸರ್ಕಾರ ರಚನೆಗೆ ತುದಿಗಾಲಿನಲ್ಲಿ ನಿಂತಿದೆ. ಆದರೆ ಹೀಗೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿರುವ ಬಿಎಸ್ವೈ ಪಡೆಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದ್ದು, ಶಾ ನೇತೃತ್ವದ ಹೈಕಮಾಂಡ್ ಸಿಎಂ ರೇಸ್ನಲ್ಲಿರುವ ಬಿಎಸ್ವೈ ಬದಿಗಿಟ್ಟು ಶಾಸಕ ಮಾಧುಸ್ವಾಮಿಯನ್ನು ಸಿಎಂ ಸ್ಥಾನಕ್ಕೆ ಪಟ್ಟಾಭಿಷೇಕ ಮಾಡಲು ಸಜ್ಜಾಗಿದೆ.
ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಡೆದ ರಾಜೀನಾಮೆ ಪ್ರಹಸನ ಹಾಗೂ ಸದನದ ಗದ್ದಲದ ವೇಳೆ ಬಿಜೆಪಿಯನ್ನು ಸಮರ್ಥವಾಗಿ ಮುನ್ನಡೆಸಿ, ಆಡಳಿತ ಪಕ್ಷದ ಟೀಕೆಗಳಿಗೆ ತಕ್ಕುದಾದ ಪ್ರತ್ಯುತ್ತರ ನೀಡಿದ ಸಂಸದೀಯ ಪಟು ಮಾಧುಸ್ವಾಮಿ. ಹೀಗಾಗಿ ಅವರೇ ವಿರೋಧ ಪಕ್ಷವನ್ನು ಬಾಯಿ ಮುಚ್ಚಿಸಲು ಸೂಕ್ತ ವ್ಯಕ್ತಿ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಹೈಕಮಾಂಡ್ ಅವರನ್ನೇ ಸಿಎಂ ಆಗಿ ನೇಮಿಸಲು ನಿರ್ಧರಿಸಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿಯಿಂದ ಒಟ್ಟು ಮೂರು ಬಾರಿ ಗೆದ್ದು ಬಂದಿರುವ ಮಾಧುಸ್ವಾಮಿ ಕ್ಲೀನ್ ಇಮೇಜ್ ಉಳಿಸಿಕೊಂಡು ಬಂದಿದ್ದಾರೆ. ನಾಡಿನ ಪ್ರಬಲವಾದ ಲಿಂಗಾಯತ್ ಸಮುದಾಯಕ್ಕೆ ಸೇರಿದ ಮಾಧುಸ್ವಾಮಿ ಅಪಾರವಾದ ರಾಜಕೀಯ ಜ್ಞಾನ ಹಾಗೂ ಕಾನೂನಿನ ತಿಳುವಳಿಕೆ ಇದೆ.
ಶಾ ಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ನಡೆಸಿದ ಆಂತರಿಕ ಸಮೀಕ್ಷೆ ವೇಳೆ ಎಲ್ಲರೂ ಮಾಧುಸ್ವಾಮಿ ಹೆಸರನ್ನೇ ಸೂಚಿಸಿರುವ ಹಿನ್ನೆಲೆಯಲ್ಲಿ ಶಾ ಹೈಕಮಾಂಡ್ನ ಸದಸ್ಯರ ಜೊತೆ ಮಾತುಕತೆ ನಡೆಸಿ ಮಾಧುಸ್ವಾಮಿ ಹೆಸರನ್ನೇ ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಸಧ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ರೂ ಆಡಳಿತ ನಡೆಸುವುದು ಕಷ್ಟವಿದೆ. ಸಂವಿಧಾನಾತ್ಮಕವಾಗಿ ಅಧಿಕಾರ ನಡೆಸಲು 113 ಸಂಖ್ಯಾಬಲ ಬೇಕೇಬೇಕು. ಒಂದೊಮ್ಮೆ ಅತಿದೊಡ್ಡ ಪಕ್ಷ ಅಂತಾ ಗವರ್ನರ್ ಅವಕಾಶ ಕೊಟ್ಟರೂ ನಿತ್ಯವೂ ಸವಾಲುಗಳು ಎದುರಾಗಲಿದೆ. ಸಿದ್ದು, ಡಿಕೆಶಿ,ಕುಮಾರಸ್ವಾಮಿಯನ್ನು ಕಾನೂನಾತ್ಮಕವಾಗಿ ಎದುರಿಸಬೇಕು. -ಇಂಥಾ ಸ್ಥಿತಿಯನ್ನು ನಿರ್ವಹಿಸೋ ಸೂಕ್ತ ವ್ಯಕ್ತಿಯಾಗಿ ಮಾಧುಸ್ವಾಮಿಯನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ.
ಇದಕ್ಕೆ ಬಿಎಸ್ವೈ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದ್ದು, ಹೀಗಾಗಿ ಬಿಎಸ್ವೈಗೆ ರಾಜ್ಯಪಾಲರ ಸ್ಥಾನವನ್ನು ನೀಡಿ ಮನವೊಲಿಸಲು ಬಿಜೆಪಿ ಪಾಳಯ ಸಿದ್ಧವಾಗಿದೆ. ಹೀಗಾಗಿ ಬಿಎಸ್ವೈ ಸಿಎಂ ಆಗುವ ಕನಸಿಗೆ ಹಿನ್ನಡೆಯಾಗಲಿದೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಖಡಕ್ ಆಗಿ ಇದೇ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಸರ್ಕಾರವಾದ್ರೆ ಮಾಧುಸ್ವಾಮಿ ನೇತೃತ್ವದಲ್ಲಿ ಇಲ್ಲವಾದರೇ ಚುನಾವಣೆಗೆ ಹೋಗೋಣ ಎಂಬ ತೀರ್ಮಾನದಲ್ಲಿರೋದು ಬಿಜೆಪಿ ನಾಯಕರಿಗೆ ಮಾಧುಸ್ವಾಮಿಯನ್ನೇ ಒಪ್ಪಿಕೊಳ್ಳುವಂತೆ ಸ್ಥಿತಿ ನಿರ್ಮಿಸಿದೆ ಎನ್ನಲಾಗುತ್ತಿದೆ.
Comments are closed.