ಕರ್ನಾಟಕ

ಮದುವೆ ಸಂದರ್ಭ ರಾಜಕೀಯಕ್ಕೆ ಬರಬಾರದು ಎಂದು ಅನಿತಾ ಷರತ್ತು ವಿಧಿಸಿದ್ದರು; ಕುಮಾರಸ್ವಾಮಿ

Pinterest LinkedIn Tumblr


ನಿಮ್ಮನ್ನು ಮದುವೆಯಾಗಬೇಕಾದರೆ ನೀವು ರಾಜಕೀಯಕ್ಕೆ ಬರಬಾರದು ಎಂದು ಅನಿತಾ ಷರತ್ತು ವಿಧಿಸಿದ್ದರು. ವಿಧಿಯಾಟ ಇಂದು ಅವರು ಕೂಡ ನನ್ನ ಜೊತೆ ವಿಧಾನಸಭೆಯಲ್ಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ತಮ್ಮ ವೈವಾಹಿಕ ಜೀವನದ ಘಟನೆಯನ್ನು ಮೆಲುಕು ಹಾಕಿದ್ದಾರೆ.

ವಿಧಾನಸಭೆ ಸದನದಲ್ಲಿ ವಿಶ್ವಾಸ ನಿರ್ಣಯ ಮಂಡನೆ ವೇಳೆ ಮಾತನಾಡಿದ ಅವರು, ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ನಾನು ಅದರಿಂದ ದೂರ ಇರಬೇಕು ಎಂದು ಬಯಸಿದ್ದೆ. ಅನಿತಾ ಕೂಡ ಮದುವೆಗೆ ಮುನ್ನ ರಾಜಕೀಯಕ್ಕೆ ಹೋಗಬಾರದು ಎಂದಿದ್ದರು. ಆದರೆ, ಆಮೇಲೆ ನಡೆದಿದ್ದೆಲ್ಲ ವಿಧಿ ಆಟ ಎಂದರು.

1996ರಲ್ಲಿ ಚುನಾವಣೆ ಸ್ಪರ್ಧೆಗೆ ಒತ್ತಡ ಬಂದಿತ್ತು. ಕನಕಪುರ ಭಾಗದ ಕಾರ್ಯಕರ್ತರು ನನ್ನ ಬಳಿ ಬಂದು, ಶಿವಕುಮಾರ್ ಅವರನ್ನು ಎದುರಿಸುವ ಶಕ್ತಿ ನಮಗಿಲ್ಲ. ಹೀಗಾಗಿ ಬಂದು ಇಲ್ಲಿ ಬಂದು ಸ್ಪರ್ಧಿಸಬೇಕು ಎಂದು ಬಲವಂತ ಮಾಡಿದರು. ಈ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ನಾನು ನಾಮಪತ್ರ ಸಲ್ಲಿಸಿದೆ. ನನ್ನ ಈ ನಿರ್ಣಯ ತಂದೆಗೂ ಇಷ್ಟವಿರಲಿಲ್ಲ. ಆ ಚುನಾವಣೆಯಲ್ಲಿ ನಾನು ಸೋಲು ಕಂಡೆ ಎಂದು ತಮ್ಮ ರಾಜಕೀಯ ಪ್ರವೇಶದ ಕುರಿತು ವಿವರಿಸಿದರು.

ಸಿಎಂ ಸ್ಥಾನಕ್ಕೆ ನಾನು ಎಂದು ಅಂಟಿಕೊಂಡು ಕೂತವನಲ್ಲ. ಅಧಿಕಾರದ ಕುರಿತು ನನಗೆ ಯಾವುದೇ ಮೋಹವಿಲ್ಲ ಇಷ್ಟು ದಿನ ಕಾದಿದ್ದು, ಅತೃಪ್ತರು ಮನ ಬದಲಾಯಿಸುತ್ತಾರೆ ಎಂದು. ಆದರೆ, ಅದು ಆಗಲಿಲ್ಲ. ವಿಶ್ವಾಸ ಮತ ವಿಳಂಬವಾಗಿದ್ದಕ್ಕೆ ಜನರಲ್ಲಿ ಕ್ಷಮೆ ಕೋರುತ್ತೇನೆ. ನಾನು ಯಾವುದೇ ಸ್ಥಾನಕ್ಕೂ ಅಂಟಿಕೊಂಡು ಕೂತವನಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಜನರ ಪರವಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಇದರಲ್ಲಿ ಮನುಷ್ಯ ಸಹಜ ಲೋಪಗಳಾಗಿರಬಹುದು. ಆ ತಪ್ಪನ್ನು ತಿದ್ದಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ ಎಂದು ಸದನದ ಮುಂದೆ ಹೇಳಿದರು.

Comments are closed.