ನೆಲಮಂಗಲ: ಗರ್ಭಧಾರಣೆಗೆ ಅನುಕೂಲವಾಗುತ್ತೆ ಅಂತ ಕಾರಿನಲ್ಲಿ ಜಾಹಿರಾತು ನೋಡಿ ಆ ವ್ಯಕ್ತಿ ಕೊಟ್ಟ ಗುಳಿಗೆ ಸೇವಿಸಿ ಗಂಡ ಸಾವಿಗೀಡಾಗಿ ಪತ್ನಿ ಅಸ್ವಸ್ಥರಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥ ಪತ್ನಿ ಗಂಗಮ್ಮನಿಗೆ (37) ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಮೃತ ಶಶಿಧರ್ಗೆ ನೆಲಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಂಪತಿಗೆ 12 ವರ್ಷದ ಹಿಂದೆ ಮದುವೆ ಆಗಿತ್ತು. ಆದರೆ, ಮಕ್ಕಳಾಗಿರಲಿಲ್ಲ. ಅರಿಶಿನಕುಂಟೆ ಗ್ರಾಮದಲ್ಲಿ ರೇಷನ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ಬಿದ ಅವರು ಬಿಹಾರಿ ಮೂಲದ ಕಾರಿನಲ್ಲಿ ಜಾಹೀರಾತು ಹಾಕಿಕೊಂಡು ಬಂದವರನ್ನ ನಂಬಿ ಮಾತ್ರೆ ಖರೀದಿಸಿ, ಆ ವ್ಯಕ್ತಿ ಮುಂದೆಯೇ ದಂಪತಿ ಮಾತ್ರೆ ಸೇವಿಸಿ ಎರಡು ಸಾವಿರ ಮುಂಗಡ ಹಣ ಕೊಟ್ಟಿದ್ದಾರೆ.
ಅಲ್ಲದೆ, ಉಳಿದ 23ಸಾವಿರ ಗರ್ಭಧಾರಣೆ ಬಳಿಕ ಕೊಡುವುದಾಗಿ ಹೇಳಿದ್ದರಂತೆ. ಆದರೆ, ಗುಳಿಗೆ ತೆಗೆದುಕೊಂಡ ಹತ್ತು ನಿಮಿಷದಲ್ಲೇ ಭೇದಿ ಶುರುವಾಗಿ ದಂಪತಿ ನಿತ್ರಾಣಗೊಂಡು ತೀವ್ರ ಅನಾರೋಗ್ಯಕ್ಕೊಳಗಾಗಿದ್ದಾರೆ. ಈ ವೇಳೆ ಪತಿ ಮೃತಪಟ್ಟಿದ್ದು, ಪತ್ನಿ ಅಸ್ವಸ್ಥರಾಗಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆರಕ್ಷಕರು ತನಿಖೆ ನಡೆಸುತ್ತಿದ್ದಾರೆ.
Comments are closed.